ಕಾಸರಗೋಡು : ಕಟೀಲು ಶ್ರೀ ದುರ್ಗಾ ಪರಮೇಶ್ವರಿ, ಧರ್ಮಸ್ಥಳ ಸಹಿತ ವಿವಿಧ ಯಕ್ಷಗಾನ ಮೇಳಗಳಲ್ಲಿ ಒಟ್ಟು ಆರು ದಶಕಗಳ ಕಾಲ ಕಲಾವಿದರಾಗಿ ತಿರುಗಾಟ ನಡೆಸಿದ ಮುಳಿಗದ್ದೆ ತಾಳ್ತಜೆ ಸುಂದರ ಕುಲಾಲ್ (79) ಅವರು ಕಾಸರಗೋಡಿನ ಬೇಡಗುಡ್ಡೆಯಲ್ಲಿರುವ ಸ್ವಗೃಹದಲ್ಲಿ ದಿನಾಂಕ 15 ಸೆಪ್ಟೆಂಬರ್ 2026ರಂದು ನಿಧನ ಹೊಂದಿದರು. ಮೃತರು ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಯಕ್ಷಗಾನ ಕಲಾವಿದರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಅವರು ತಮ್ಮ ವೃತ್ತಿಬದುಕಿನ ಕೊನೆಯ ಎರಡು ದಶಕಗಳನ್ನು ಕಟೀಲು ಮೇಳದಲ್ಲೇ ಕಳೆದಿದ್ದರು.
ಎಂ.ಟಿ.ಎಸ್. ಕುಲಾಲರು ಯಕ್ಷಗಾನದ ಆಡುಂಬೊಲದಲ್ಲಿ ಹುಟ್ಟಿ ಬೆಳೆದವರು. ಅವರು ತಮ್ಮ ಮಾವ ಬೇತಕುಂಞ ಕುಲಾಲ್ ಇವರಲ್ಲಿ ಯಕ್ಷಗಾನ ಹೆಜ್ಜೆಗಾರಿಕೆ ಅಭ್ಯಾಸಮಾಡಿ, ಧರ್ಮಸ್ಥಳ ಮೇಳ ಸೇರಿ ಕೋಡಂಗಿ ವೇಷದಿಂದ ವೃತ್ತಿ ಬದುಕು ಆರಂಭಿಸಿದರು. ಬಾಲಗೋಪಾಲ, ಮುಖ್ಯ ಸ್ತ್ರೀವೇಷಗಳನ್ನೂ ಮಾಡಿದರು. ಮುಂದೆ, ಮೂಲ್ಕಿ, ಸುರತ್ಕಲ್, ಕುಂಬ್ಳೆ, ಕದ್ರಿ, ಬಪ್ಪನಾಡು ಮೇಳಗಳಲ್ಲಿ ವೃತ್ತಿ ಬದುಕು ಮುಂದುವರಿಸಿ, ಕಟೀಲು ಮೇಳಕ್ಕೆ ಸೇರಿ, ನಿವೃತ್ತರಾದರು.
ತೆಂಕುತಿಟ್ಟಿನ ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಕುಲಾಲ್ ಅವರು ರಾಜವೇಷ, ಪೋಷಕ ವೇಷ, ಸ್ತ್ರೀವೇಷ, ಹಾಸ್ಯ ಹೀಗೆ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರು. ಭಾಗವತಿಕೆಯಲ್ಲೂ ಪರಿಣತಿ ಪಡೆದಿದ್ದರು. ಒಂದೇ ತಿರುಗಾಟದಲ್ಲಿ ಕಾರ್ತವೀರ್ಯನಾಗಿ, ವನಪಾಲಕನಾಗಿ, ರಾವಣನಾಗಿ, ರೇಣುಕೆಯಾಗಿ, ಜಮದಗ್ನಿಯಾಗಿ, ಭಾರ್ಗವನಾಗಿ ಪಾತ್ರವಹಿಸಿದ ಅಸಾಧಾರಣ ಪ್ರತಿಭೆ ಅವರು. ಕೋಟಿ ಚೆನ್ನಯ, ಸಾವಿರೊಡೊರ್ತಿ ಸಾವಿತ್ರಿ ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಕಟೀಲು ಮೇಳದ ಅಭಿಮಾನಿಗಳು ಅವರ ಮನೆಗೆ ತೆರಳಿ ಅವರನ್ನು ಗೌರವಿಸಿದ್ದರು.
