ಮಂಗಳೂರು : ಸರಯೂ ಮಕ್ಕಳ ಮೇಳದ ‘ಸರಯೂ ಬಾಲ ಯಕ್ಷ ವೃಂದ’ದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 26ನೇ ವರ್ಷದ ‘ಸರಯೂ ಅಷ್ಠಾಹ’ದ ನಾಲ್ಕನೇ ದಿನದ ಕಾರ್ಯಕ್ರಮವು ದಿನಾಂಕ 28 ಮೇ 2026ರಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಘಟಕ, ಪಣಂಬೂರು ನಂದನೇಶ್ವರ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆದ ಪಿ. ಪ್ರಸಿದ್ಧರು “ಯಕ್ಷಗಾನಕ್ಕೆ ತನ್ನದೇ ಆದ ಮೂಲಭೂತ ಚೌಕಟ್ಟು ಇದೆ. ಆ ನಡೆಯನ್ನು ಉಳಿಸಿ – ಬೆಳೆಸುವುದು ನಮ್ಮ ಕರ್ತವ್ಯ. ನಮ್ಮ ಪೀಳಿಗೆಗೆ ಬರುವಾಗ ಯಕ್ಷಗಾನವು ಒಂದು ಪಕ್ಷವಾದ ಫಲವಾಗಿ ನಮ್ಮ ಕೈಸೇರಿದೆ. ನಾವು ಅದರ ಯಾವುದಾದರೂ ಒಂದು ಭಾಗವಾಗಿ ಆ ಸವಿಯನ್ನು ಉಣ್ಣುತ್ತಿದ್ದೇವೆ. ಒಂದು ಮಕ್ಕಳ ಮೇಳವಾಗಿ ರಂಜಿಸುವ ಸರಯೂ ತಂಡಕ್ಕೆ ನಮ್ಮೆಲ್ಲರ ಆಶೀರ್ವಾದ ಇದ್ದೇ ಇರುತ್ತದೆ” ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಯಕ್ಷ ಕಲಾವಿದ, ಸ್ವಯಂಸೇವಕ, ದೇರೇಬೈಲು ಯೋಗೀಶ್ ದೇವಾಡಿಗರನ್ನು ಸನ್ಮಾನಿಸಲಾಯಿತು. ತಲೆಕಳ ದಾಮೋದರ ಭಟ್, ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ತೆಂಕು-ಬಡಗಿನ ಕಲಾವಿದ ಕೋಟ ತೋಟದ ಮನೆ ಜನಾರ್ದನ ಹಂದೆ, ಪದ್ಯಾಣ ಶಂಕರನಾರಾಯಣ ಭಟ್, ದೀಪಕ್, ಸುಧಾಕರ ಪೇಜಾವರ್, ಚಂದ್ರಶೇಖರ ಹೆಚ್., ಸಂಸ್ಥೆಯ ಅಧ್ಯಕ್ಷ ಮಧುಸೂದನ ಎ. ಉಪಸ್ಥಿತರಿದ್ದರು. ಶೋಭಾ ಎಸ್. ಪೇಜಾವರ್ ಸನ್ಮಾನ ಪತ್ರ ವಾಚಿಸಿದರು. ಪ್ರತೀಕ್ ರಾವ್ ನಿರ್ವಹಿಸಿ, ನಿತ್ಯಶ್ರೀಪೂಜಾರಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರಸ್ತುತವಾಯಿತು.
