ಹೊನ್ನಾವರ : ಬಡಗು ತಿಟ್ಟಿನ ಪ್ರತಿಭಾಸಂಪನ್ನ ಹಾಸ್ಯಕಲಾವಿದ ಕಾಸರಕೋಡು ಶ್ರೀಧರ ಸುಬ್ರಾಯ ಭಟ್ (51) ದಿನಾಂಕ 31 ಜುಲೈ 2026ರಂದು ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಹೊನ್ನಾವರ ತಾಲೂಕಿನ ಕಾಸರಗೋಡಿನವರಾದ ಇವರು ಪ್ರಸ್ತುತ ಸಾಲ್ಕೋಡು ಗ್ರಾಮದ ಮುಲ್ಲೆಮಕ್ಕಿ ಎಂಬಲ್ಲಿ ವಾಸವಾಗಿದ್ದರು.
‘ಹಾಸ್ಯ ಚಕ್ರವರ್ತಿ’ ಎಂದೇ ಪ್ರಸಿದ್ಧರಾಗಿದ್ದ ಅವರು ಮೂರೂವರೆ ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ಹಿತಮಿತ ಹಾಸ್ಯದೊಂದಿಗೆ ಮುಖ್ಯ ಕಲಾವಿದರಿಗೆ ಪೂರಕವಾಗುತ್ತಿದ್ದರು. ತಮ್ಮ ಸಮಯ ಪ್ರಜ್ಞೆಯಿಂದ ದಿನನಿತ್ಯದ ಘಟನಾವಳಿಗಳನ್ನು ತಮ್ಮ ಸಂಭಾಷಣೆಯಲ್ಲಿ ಸೇರಿಸಿ ಜನರನ್ನು ನಗಿಸುವಳ್ಳಿ ಸಿದ್ಧಹಸ್ತರಾಗಿದ್ದರು. ಕೆರೆಮನೆ ಶಿವರಾಮ ಹೆಗಡೆ ಮತ್ತು ದೊಡ್ಡತಂದೆ ನರಸಿಂಹ ಭಟ್ಟರಿಂದ ಪ್ರೇರಿತರಾಗಿ ಹದಿನಾರರ ಹರೆಯದಲ್ಲೇ ಕೆರೆಮನೆ ಕೇಂದ್ರದಲ್ಲಿ ಹೆರಂಜಾಲು ವೆಂಕಟರಮಣ ಗಾಣಿಗರಲ್ಲಿ ಯಕ್ಷಗಾನ ಕಲಿತು ಹದಿನೆಂಟನೆ ವಯಸ್ಸಿಗೆ ಮೇಳ ಸೇರಿ 33 ವರ್ಷಗಳ ಕಲಾಸೇವೆ ಗೈದಿರುತ್ತಾರೆ. ಇಡಗುಂಜಿ, ಸಾಲಿಗ್ರಾಮ, ಮಂದಾರ್ತಿ, ಜಲವಳ್ಳಿ, ಗುಂಡಬಾಳ ಮೇಳಗಳಲ್ಲಿ 13 ವರ್ಷಗಳ ತಿರುಗಾಟ ಮಾಡಿ ಮುಂದೆ ವಿವಿಧ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಯಾರ ಅನುಕರಣೆಯೂ ಇಲ್ಲದ ತುಂಬಾ ಚುರುಕಿನ ಮಾತು, ಕುಣಿತ, ಅಭಿನಯಗಳಿಂದ ಕಲಾರಸಿಕರಿಗೆ ಸಂತೋಷ ನೀಡುತ್ತಿದ್ದರು. ಕನಕಾಂಗಿ ಕಲ್ಯಾಣದ ದೂತ, ಕೀಚಕ ವಧೆಯ ವಿಜಯ, ದುಷ್ಟಬುದ್ಧಿ ಪ್ರಸಂಗದ ಕಪ್ಪದ ದೂತ, ಕಾರ್ತವೀರ್ಯಾರ್ಜುನದ ಬಾಗಿಲ ಭಟ, ಕೃಷ್ಣಾರ್ಜುನ ಪ್ರಸಂಗದ ದಾರುಕ ಹೀಗೆ ಹಲವು ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ಚಂದಗೋಪ, ರಜಕ, ನಂದಿಶೆಟ್ಟಿ, ಬೇಹಿನಚರ, ಅಜ್ಜಿ ಹೀಗೆ ಎಲ್ಲಾ ರೀತಿಯ ಪೌರಾಣಿಕ ಹಾಸ್ಯಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸುತ್ತಿದ್ದರು. ಅಸಾಧಾರಣ ಪ್ರತ್ಯುತ್ಪನ್ನ ಮತಿತ್ವ ಅವರದಾಗಿತ್ತು. ಚಂಡೆವಾದನದಲ್ಲೂ ಪರಿಣತರಾಗಿದ್ದರು. ಅವರ ಯಕ್ಷಗಾನ ಸೇವೆ ಗುರುತಿಸಿ ಹಲವೆಡೆ ಗೌರವಿಸಲಾಗಿತ್ತು.
