ಮಂಗಳೂರು : ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಇದರ ವತಿಯಿಂದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷಗುರು ಶ್ರೀ ಜಯಕರ್ ಪಂಡಿತ್ ಬಜಾಲ್ ಇವರ ನಿರ್ದೇಶನದಲ್ಲಿ ಕಲ್ಯಾಣತ್ರಯ ಕನ್ನಡ ಯಕ್ಷಗಾನ ಬಯಲಾಟವನ್ನು ದಿನಾಂಕ 07 ನವೆಂಬರ್ 2026ರಂದು ಮಂಗಳೂರಿನ ಬೋಳಾರ ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್ ಇವರು ವಹಿಸಲಿದ್ದು, ನಿವೃತ್ತ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಇವರು ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಜಯಕರ್ ಪಂಡಿತ್ ನೇತೃತ್ವದ ಶೃಂಗಾರ್ ಮೆಲೋಡಿಸ್ ತಂಡದ ಉದ್ಘಾಟನೆ, 11-00 ಗಂಟೆಗೆ ಈ ತಂಡದಿಂದ ಭಕ್ತಿಗೀತೆ, ಜಾನಪದ ಗೀತೆ ಹಾಗೂ ಭಾವಗೀತೆಗಳ ಸಂಗೀತ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1-00 ಗಂಟೆಗೆ ದಯಾನಂದ ಕೋಡಿಕಲ್ ಇವರ ಶಿಷ್ಯ ವೃಂದದವರಿಂದ ‘ಯಕ್ಷಗಾನಾರ್ಚನೆ’, ಸಂಜೆ 3-00 ಗಂಟೆಗೆ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ಲಕ್ಷ್ಮೀ ಸ್ವಯಂವರ’, ‘ಸೀತಾ ಕಲ್ಯಾಣ’ ಮತ್ತು ‘ಶ್ರೀನಿವಾಸ ಕಲ್ಯಾಣ’ ಕಲ್ಯಾಣತ್ರಯ ಕನ್ನಡ ಯಕ್ಷಗಾನ ಬಯಲಾಟ, 7-00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಿ. ಶಿವಪ್ರಸಾದ್ ಪ್ರಭು ಇವರು ವಹಿಸಲಿದ್ದು, ಯಕ್ಷಗಾನ ಕಲಾವಿದೆ ಶ್ರೀಮತಿ ನಮೃತಾ ರಾವ್ ವಿ.ಎಸ್. ಇವರಿಗೆ ‘ದಿ. ಚಂದ್ರಶೇಖರ ಬಲ್ಯಾಯ ಸಂಸ್ಮರಣಾ ಪ್ರಶಸ್ತಿ’, ಯಕ್ಷಗಾನ ಕಲಾವಿದರಾದ ನಿತಿನ್ ಕುಂಪಲ ಇವರಿಗೆ ಗೌರವ ಸನ್ಮಾನ ಮಾಡಲಾಗುವುದು.

