ಮಂಗಳೂರು : ಸಂಸ್ಕಾರ ಭಾರತೀ ಮಂಗಳೂರು ನಗರ ಇವರು ಭರತಂಜಲಿ (ರಿ.) ಕೊಟ್ಟಾರ ಇವರ ಸಹಯೋಗದೊಂದಿಗೆ ಭರತಾಂಜಲಿ ಸಭಾ ಗ್ರಹದಲ್ಲಿ ದಿನಾಂಕ 24 ಫೆಬ್ರವರಿ 2026ರಂದು ಭರತಮುನಿ ಸ್ಮೃತಿ ದಿನ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಪುಷ್ಪಾರ್ಚನೆ ಮಾಡಿ ಉಪನ್ಯಾಸ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ವಿದ್ವಾನ್ ಕಮಲಾದೇವಿ ಪ್ರಸಾದ್ ಅಸ್ರಣ್ಣ “ಭರತಮುನಿ ಪ್ರಾಚೀನ ಭಾರತದ ಮಹಾನ್ ಋಷಿ. ಭಾರತೀಯ ರಂಗಭೂಮಿ ಮತ್ತು ಆಧ್ಯಾತ್ಮಿಕ ಕಲೆಗಳ ಪಿತಾಮಹ. ಭರತ ಮುನಿಯು ರಸ ಸಿದ್ದಾಂತದ ಪ್ರತಿಪಾದಕ ನೃತ್ಯ ಮತ್ತು ನಾಟಕ ಕಲೆಗೆ ಶಾಸ್ತ್ರೀಯ ರೂಪವನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಾಟ್ಯ ಶಾಸ್ತ್ರ ಗ್ರಂಥವು ಜಗತ್ತಿನ ಐದನೇ ವೇದ ಎಂದು ಕರೆಯಲ್ಪಡುತ್ತದೆ. ಭರತನ ನಾಟ್ಯ ಶಾಸ್ತ್ರದಲ್ಲಿ ನಾಟ್ಯ ಶಾಸ್ತ್ರದ ಚೌಕಟ್ಟುಗಳು, ಲಕ್ಷಣಗಳು ಶಾಸ್ತ್ರೀಯ ಕಲೆಗಳನ್ನು ವಿಶಿಷ್ಟ ಕಲೆಗಳನ್ನಾಗಿ ಮಾಡುತ್ತದೆ. ಚತುರ್ವಿಧ ಅಭಿನಯಗಳಿಂದ ಬ್ರಹ್ಮಾನಂದವನ್ನು ಕೊಡುವ ಶಕ್ತಿ ಈ ಕಲೆಗಳಿಗೆ ಇವೆ. ಮಾನವರನ್ನು ಸಂಸ್ಕಾರದಡೆಗೆ ಕೊಂಡೊಯ್ಯುವ ಶಕ್ತಿ ನಾಟ್ಯ ಶಾಸ್ತ್ರಕ್ಕೆ ಇದೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊಫೆಸರ್ ಕೃಷ್ಣಮೂರ್ತಿ “ನಾಟ್ಯ ಶಾಸ್ತ್ರದ ಇತಿಹಾಸವನ್ನು ಹೇಳುತ್ತಾ, ಕಾವ್ಯ ಮೀಮಾಂಸೆ ಹುಟ್ಟಿದ್ದೇ ನಾಟ್ಯ ಶಾಸ್ತ್ರದ ಆಧಾರದಿಂದ. ನಾಟ್ಯ ಶಾಸ್ತ್ರದಲ್ಲಿ ಕಲಾವಿದನ ಮನಸ್ಸನ್ನು ಒಂದು ನೀರಿನ ಸರೋವರಕ್ಕೆ ಹೋಲಿಸಿದರೆ ಅದರಲ್ಲಿ ಬರುವ ಅಲೆಗಳು ಭಾವಗಳು, ಅದರಲ್ಲೂ ಸ್ಥಾಯಿ ಭಾವಕ್ಕೆ ಬಹಳ ಪ್ರಾಮುಖ್ಯತೆ ಇದೆ. ನಾಟ್ಯಕಲೆಯ ಅಭ್ಯಾಸದಿಂದ ಕಲಾವಿದರು ಸದಾ ಸಂಸ್ಕಾರವಂತರಾಗಿ ಗುಣಶೀಲರಾಗಿ ಇರುತ್ತಾರೆ” ಎಂದು ನುಡಿದರು.

ಸಂಸ್ಕಾರ ಭಾರತೀ ಮಾರ್ಗದರ್ಶಕ ಚಂದ್ರಶೇಖರ ಶೆಟ್ಟಿ ಸಂಘಟನೆಯ ಧ್ಯೇಯೋದ್ದೇಶ ಹೇಳಿದರು. ಸಂಸ್ಕಾರ ಭಾರತೀಯ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ ಅಧ್ಯಕ್ಷತೆ ವಹಿಸಿದ್ದು, ಶುಭವನ್ನು ಹಾರೈಸಿದವರು. ವಿಪ್ರವೇದಿಕೆ ಗೌರವಾಧ್ಯಕ್ಷ ನ್ಯಾಯವಾದಿ ಜಯರಾಮ್ ಪದಕಣ್ಣಾಯ, ಉದ್ಯಮಿ ಪ್ರಶಾಂತ್ ಮುಡಾಯಿಕೊಡಿ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಕಾರ ಭಾರತೀ ಪ್ರಧಾನ ಕಾರ್ಯದರ್ಶಿ ಹಾಗೂ ಭರತಂಜಲಿಯ ನಿರ್ದೇಶಕ ಶ್ರೀಧರ ಹೊಳ್ಳ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಲಾವಿಭಾಗದ ಪ್ರಮುಖ್, ಸನಾತನ ನಾಟ್ಯಲಯದ ವಿದುಷಿ ಶೀಲತಾ ನಾಗರಾಜ ನಿರೂಪಿಸಿ, ಪ್ರವೀಣ್ ಬಸ್ತಿ ವಂದಿಸಿದರು. ಪ್ರಾಂತ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಪದಾಧಿಕಾರಿಗಳಾದ ಮಾಧವ ಭಂಡಾರಿ, ರಘುವೀರ್ ಗಟ್ಟಿ, ವಿದುಷಿ ಪ್ರತಿಮಾ ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು. ನೃತ್ಯ ನಮನ ಕಾರ್ಯಕ್ರಮದಲ್ಲಿ ನಾಟ್ಯನಿಕೇತನದ ರಾಜಶ್ರೀ ಉಳ್ಳಾಲ್ ಇವರ ಶಿಷ್ಯ ಪ್ರದ್ಯುಮ್ನ ತೇಜಸ್ವಿ ಹಾಗೂ ನೃತ್ಯ ಸುಧಾ ಸಂಸ್ಥೆಯ ವಿದುಷಿ ಸೌಮ್ಯ ಸುಧೀಂದ್ರ ಶಿಷ್ಯೆ ಹಾಗೂ ಪುತ್ರಿ ಶ್ರಿಯಾ ರಾವ್ ಸಣ್ಣಯ್ಯ ಇವರ ನೃತ್ಯ ಕಾರ್ಯಕ್ರಮವು ಮನೋಜ್ಞವಾಗಿ ಜರಗಿತು.

