ಮಂಗಳೂರು : ಭಾರತ ಸರಕಾರದ ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಎಂಡ್ ಟ್ರೈನಿಂಗ್ (ಸಿ.ಸಿ.ಆರ್.ಟಿ.) ವಿಭಾಗದವರು ವರ್ಷ ಪ್ರತಿ ಸಂದರ್ಶನದ ಮೂಲಕ ಆಯ್ಕೆ ಮಾಡುವ ಪ್ರತಿಷ್ಠಿತ ಕಲ್ಚರಲ್ ಟ್ಯಾಲೆಂಟ್ ಸರ್ಚ್ ಸ್ಕೀಮ್ (ಸಿ.ಟಿ.ಎಸ್.ಎಸ್.)ನ ಜ್ಯೂನಿಯರ್ ವಿಭಾಗದ ಶಿಷ್ಯವೇತನಕ್ಕಾಗಿ ಮಂಗಳೂರಿನ ಅರಳು ಪ್ರತಿಭೆ ಕುಮಾರಿ ಮೇಧಾ ರಾವ್ ಭರತನಾಟ್ಯ ವಿಷಯದಲ್ಲಿ ಅಧ್ಯಯನಕ್ಕಾಗಿ ಆಯ್ಕೆಯಾಗಿದ್ದಾಳೆ.
ಇವಳು ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟಿನ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶರಲ್ಲಿ ಕಳೆದ ಎಂಟು ವರುಷಗಳಿಂದ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದು, ನಗರದ ಶಾರದಾ ವಿದ್ಯಾಲಯದಲ್ಲಿ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯಾಗಿದ್ದಾಳೆ. ಕರ್ನಾಟಕ ಸೆಕೆಂಡರಿ ಎಜುಕೇಶನ್ ಹಾಗೂ ಎಕ್ಸಾಮಿನೇಶನ್ ಮಂಡಳಿಯವರು ಆಯೋಜಿಸುತ್ತಿದ್ದ ರಾಜ್ಯ ಮಟ್ಟದ ಜೂನಿಯರ್ ಪರೀಕ್ಷೆಯಲ್ಲಿ ಶೇ.91 ಅಂಕ ಗಳಿಸಿ ನೃತ್ಯ ವಿದ್ಯೆಯನ್ನು ಆಸಕ್ತಿಯಿಂದ ಅಭ್ಯಸಿಸುತ್ತಿರುವ ವಿದ್ಯಾರ್ಥಿನಿ ಈಕೆ. ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮದ ಮೂಲಕ ವೈಯಕ್ತಿಕ ನೃತ್ಯ ಕಾರ್ಯಕ್ರಮಗಳನ್ನು ನೀಡುವುದರೊಂದಿಗೆ ತನ್ನ ನೃತ್ಯಶಾಲೆಯ ಸಮೂಹ ನೃತ್ಯ ಕಾರ್ಯಕ್ರಮಗಳಲ್ಲಿ ಹಾಗೂ ನೃತ್ಯನಾಟಕಗಳಲ್ಲಿ ಭಾಗವಹಿಸುತ್ತಾ ತನ್ನ ನೃತ್ಯ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುತ್ತಿದ್ದಾಳೆ.
