Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಹಾಗೂ ಪ್ರಶಸ್ತಿ ಪ್ರದಾನ | ಅಕ್ಟೋಬರ್ 10

    October 9, 2026

    ಆಂಧ್ರಪ್ರದೇಶದಲ್ಲಿ ‘ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ’ | ಅಕ್ಟೋಬರ್ 10

    October 9, 2026

    ರಾಗ ಧನ ಉಡುಪಿ (ರಿ) ಸಂಸ್ಥೆಯ ‘ರಾಗರತ್ನ ಮಾಲಿಕೆ-54’ ಸರಣಿ ಸಂಗೀತ | ಅಕ್ಟೋಬರ್ 11

    October 9, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ 2027’
    Cultural

    ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ 2027’

    October 9, 2026No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇದರ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಮತ್ತು ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಗಳು ಈ ವರ್ಷ ಒಟ್ಟಿಗೆ ನಡೆಯಲಿದ್ದು, ದಿನಾಂಕ 06 ಜನವರಿ 2027ರಿಂದ 10 ಜನವರಿ 2027ರವರೆಗೆ (05 ದಿನಗಳು) ನಿಗದಿಯಾಗಿದೆ, ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯು ದಿನಾಂಕ 07 ಜನವರಿ 2027ನೇ ಗುರುವಾರ ಬೆಳಗ್ಗೆ ಉದ್ಘಾಟನೆಗೊಂಡು 09 ಜನವರಿ 2027ರ (3 ದಿನಗಳು) ಶನಿವಾರ ಸಂಜೆ ಸಮಾಪನಗೊಳ್ಳಲಿದೆ.

    ಆಳ್ವಾಸ್ ನುಡಿಸಿರಿ 2027ರ ಮುಖ್ಯ ಪರಿಕಲ್ಪನೆ ‘ಕನ್ನಡ ಮನಸ್ಸು : ಭವಿಷ್ಯದ ಕನಸು’ ಎಂದಾಗಿದ್ದು, ಇದು ಯುವ ಜನತೆಯನ್ನು ಕೇಂದ್ರವಾಗಿಸಿರುವ ಪರಿಕಲ್ಪನೆಯಾಗಿದೆ. ಬದಲಾಗುತ್ತಿರುವ ಸಮಾಜದಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿಗಳನ್ನೊಳಗೊಂಡ ಕನ್ನಡದ ಅಸ್ಮಿತೆಯಿಂದ ಕರ್ನಾಟಕದ ಭವಿಷ್ಯವನ್ನು ಕಟ್ಟುವ ಸಂಕಲ್ಪ ಈ ಪರಿಕಲ್ಪನೆಯದ್ದಾಗಿದೆ.

    ಆಳ್ವಾಸ್ ನುಡಿಸಿರಿ-2027ರ ಸರ್ವಾಧ್ಯಕ್ಷರಾಗಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ : ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಇವರ ಹುಟ್ಟೂರು ಮಂಡ್ಯ ಜಿಲ್ಲೆಯ ನರಹಳ್ಳಿ. ಕನ್ನಡ ಬಿ.ಎ. ಆನರ್ಸ್ ಪದವಿ ಮತ್ತು ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಗಳನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ರ್ಯಾಂ ಕುಗಳೊಂದಿಗೆ ಮತ್ತು ಸ್ನಾತಕೋತ್ತರ ಪದವಿಯನ್ನು ಬಿ.ಎಂ.ಶ್ರೀ, ರಾಜರತ್ನಂ ಸ್ವರ್ಣ ಪದಕಗಳೊಂದಿಗೆ ಪಡೆದುದು ಮಾತ್ರವಲ್ಲ, ‘ಅತ್ಯುತ್ತಮ ವಿದ್ಯಾರ್ಥಿ’ ಎಂಬ ರಾಜ್ಯ ಪ್ರಶಸ್ತಿಗೂ, ಭಾರತ ಸರಕಾರದ ‘ಪ್ರತಿಭಾ ವಿದ್ಯಾರ್ಥಿ ವೇತನ’ಕ್ಕೂ ಪಾತ್ರರಾದವರು. ‘ಆಧುನಿಕ ಕಾವ್ಯದ ಹಿನ್ನೆಲೆಯಲ್ಲಿ ಕೆ.ಎಸ್.ನ ಕಾವ್ಯ-ಒಂದು ಅಧ್ಯಯನ’ ಎಂಬ ಪ್ರೌಢ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುವ ಇವರು ಕೆ.ಎಸ್. ನರಸಿಂಹ ಸ್ವಾಮಿಯವರ ಕುರಿತು ‘ಕೆ.ಎಸ್.ನ. ನುಡಿಮಲ್ಲಿಗೆ’ ಎಂಬ ಕೃತಿಯನ್ನು ರಚಿಸಿದ್ದು ಕನ್ನಡ ಸಾಹಿತ್ಯದ ಮೊದಲ ಪೂರ್ಣ ಪ್ರಮಾಣದ ಸಂದರ್ಶನ ಆಧಾರಿತ ಕೃತಿ ಎಂಬ ಹೆಗ್ಗಳಿಕೆಗೆ ಈ ಕೃತಿ ಪಾತ್ರವಾಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ ಇವರು ದುಡಿದಿದ್ದಾರೆ.

    ಕನ್ನಡದ ವಿದ್ವತ್ಪೂರ್ಣ ವಿಮರ್ಶೆಗೆ ಹೆಸರಾದವರಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರದ್ದು ಪ್ರಮುಖ ಹೆಸರು. ‘ಅನುಸಂಧಾನ’, ‘ನವ್ಯತೆ’, ‘ಇಹದ ಪರಿಮಳದ ಹಾದಿ’, ‘ಸಾಹಿತ್ಯ ಸಂಸ್ಕೃತಿ’, ‘ಹಣತೆಯ ಹಾಡು’, ‘ನೆಲ ಸಂಸ್ಕೃತಿ’, ‘ಸಂಸ್ಕೃತಿ ಪಥ’, ‘ಅ.ನ.ಕೃ ಮತ್ತು ಕನ್ನಡ ಸಂಸ್ಕೃತಿ’, ‘ಕುವೆಂಪು ಅವರ ನಾಟಕಗಳ ಅಧ್ಯಯನ’ ಇವುಗಳು ಇವರ ಪ್ರಮುಖ ವಿಮರ್ಶಾ ಕೃತಿಗಳು. ಸಾಹಿತಿಯಾಗಿಯೂ ಚಿರಪರಿಚಿತರಾದ ನರಹಳ್ಳಿಯವರು ‘ಅಂತರಂಗದ ಮೃದಂಗ’, ‘ಜೀವದಾಯಿನಿ’ ಎಂಬ ಪ್ರಬಂಧ ಸಂಕಲನಗಳನ್ನೂ, ‘ಸಿಂಗಲ್ ಕತೆಗಳು’, ‘ಮಾರ್ಕ್ವೆಜ್ ಕಥೆಗಳು’, ‘ಕಡಿದಾದ ಹಾದಿ’ಗಳೆಂಬ ಅನುವಾದಿತ ಕೃತಿಗಳನ್ನೂ ಹೊರತಂದುದಲ್ಲದೆ, ‘ಕ್ರಿಸ್ತಾಂಜಲಿ’ಯೇ ಮೊದಲಾದ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ.

    ಸಾಹಿತ್ಯ ನಿರ್ಮಾಣ, ವಿಮರ್ಶಾ ಬರವಣಿಗೆಗಳ ಜೊತೆಜೊತೆಗೆ ಹಲವಾರು ಸಂಸ್ಥೆಗಳೊಂದಿಗೆ ನಿಕಟ ಒಡನಾಟ ಹೊಂದಿರುವ ಇವರು ಕನ್ನಡದ ಕೆಲಸಗಳಲ್ಲಿ ನಿರಂತರ ತೊಡಗಿಸಿಕೊಂಡವರು. ವಿ.ಎಂ. ಇನಾಂದಾರ್ ಪ್ರಶಸ್ತಿ, ಆದರ್ಶ ಸಾಹಿತ್ಯ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಸ.ಸ. ಮಾಳವಾಡ ಪ್ರಶಸ್ತಿ, ಗೋರಖನಾಥ ಪುರಸ್ಕಾರ, ಶಿವರಾಮ ಕಾರಂತ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಇವರಿಗೆ ಸಂದಿದೆ. ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ತನ್ನದೇ ಆದ ಅನನ್ಯತೆಯಿಂದ ಗುರುತಿಸಿಕೊಂಡಿರುವ, ಸಾಹಿತಿಯೂ ಆಗಿರುವ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ‘ಆಳ್ವಾಸ್ ನುಡಿಸಿರಿ-2027’ರ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಒಪ್ಪಿಕೊಂಡಿರುವುದು ನಮಗೆಲ್ಲ ತುಂಬಾ ಸಂತೋಷವನ್ನೂ, ಹೆಮ್ಮೆಯನ್ನೂ ತಂದಿದೆ.

    ಆಳ್ವಾಸ್ ನುಡಿಸಿರಿ 2027ರ ಉದ್ಘಾಟಕರಾಗಿ ಶ್ರೀ ವಿಶ್ವೇಶ್ವರ ಭಟ್ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಮೂಲದ ವಿಶ್ವೇಶ್ವರ ಭಟ್ ಇವರು ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ನಾಲ್ಕು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡವರು. ತನ್ನ ವೃತ್ತಿ ಜೀವನವನ್ನು ಸಂಯುಕ್ತ ಕರ್ನಾಟಕದ ಮೂಲಕ ಆರಂಭಿಸಿದ ಇವರು ‘ವಿಜಯಕರ್ನಾಟಕ’, ‘ಕನ್ನಡ ಪ್ರಭ’ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಹಾಗೂ ‘ಸುವರ್ಣ ನ್ಯೂಸ್ ಸುದ್ದಿ ವಾಹಿನಿ’ಯ ಸಂಪಾದಕರಾಗಿಯೂ ದುಡಿದಿದ್ದಾರೆ. ‘ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ’ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಕೇಂದ್ರ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

    2016ರಲ್ಲಿ ‘ವಿಶ್ವವಾಣಿ ದಿನಪತ್ರಿಕೆ’ಯನ್ನು ಹೊಸ ರೂಪದಲ್ಲಿ ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡ ಇವರು ಪತ್ರಿಕೆಗೆ ಹೊಸತನ, ವೇಗ, ವೈವಿಧ್ಯ ಮತ್ತು ಆಕರ್ಷಕ ವಿನ್ಯಾಸಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ವಿಶ್ವವಾಣಿ ಪತ್ರಿಕೆಯು ಮುದ್ರಣ ಮಾಧ್ಯಮದ ಜೊತೆಗೆ ಡಿಜಿಟಲ್ ಮಾಧ್ಯಮದಲ್ಲೂ ತನ್ನದೇ ಆದ ಸ್ಥಾನವನ್ನು ಪಡೆಯಲು ಇವರು ಕಾರಣಕರ್ತರಾಗಿದ್ದಾರೆ. ವಿಶ್ವೇಶ್ವರ ಭಟ್‌ರ ಮಹತ್ವದ ಮತ್ತೊಂದು ಹೆಗ್ಗಳಿಕೆ ಎಂದರೆ ಇವರ ಬರಹದ ವೈವಿಧ್ಯತೆ. ಸರಳ, ನೇರ, ಚುರುಕು ಮತ್ತು ಓದುಗರನ್ನು ಚಿಂತನೆಗೆ ಹಚ್ಚುವ ಈ ಬರವಣಿಗೆಯ ಶೈಲಿ ಕನ್ನಡ ಓದುಗರಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ‘ಜನಗಳ ಮನ’, ‘ನೂರೆಂಟು ನೋಟ’, ‘ನೂರು ಮಾತು’, ‘ದಾರಿದೀಪೋಕ್ತಿ’, ‘ವಕ್ರತುಂಡೋಕ್ತಿ’, ‘ನೂರೆಂಟು ವಿಶ್ವ’, ‘ಸಂಪಾದಕರ ಸತ್ಯಶೋಧನೆ’, ’ಇದೇ ಅಂತರಂಗ ಶುದ್ಧಿ’ಗಳು ಸೇರಿದಂತೆ ಹಲವು ಜನಪ್ರಿಯ ಅಂಕಣಗಳ ಮೂಲಕ ಸಮಾಜ, ರಾಜಕೀಯ, ಶಿಕ್ಷಣ, ಸಂಸ್ಕೃತಿ, ಜಾಗತಿಕ ವಿದ್ಯಾಮಾನಗಳು ಸೇರಿದಂತೆ ಹಲವು ವಿಷಯಗಳನ್ನು ಇವರು ಅಂಕಣಗಳಲ್ಲಿ ಚರ್ಚಿಸುತ್ತಾರೆ. ಇವರ ದಿನನಿತ್ಯದ ಪ್ರಶ್ನೋತ್ತರ ಅಂಕಣ ‘ಭಟ್ಟರ ಸ್ಕಾಚ್’ ಅತ್ಯಂತ ಜನಪ್ರಿಯವಾದುದು. ಈವರೆಗೆ ಇವರು 97 ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಗಾಗಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರನ್ನು ಅರಸಿಕೊಂಡು ಬಂದಿವೆ. ಹಿರಿಯ ಪತ್ರಕರ್ತರು, ಪ್ರಬುದ್ಧ ಚಿಂತಕರು, ಜನಪ್ರಿಯ ಅಂಕಣಕಾರರು ಹಾಗೂ ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರೂ ಆಗಿರುವ ಶ್ರೀ ವಿಶ್ವೇಶ್ವರ ಭಟ್‌ರು ಆಳ್ವಾಸ್-ನುಡಿಸಿರಿ 2027ನ್ನು ಉದ್ಘಾಟಿಸುತ್ತಿರುವುದು ನಮಗೆಲ್ಲಾ ಅತೀವ ಸಂತೋಷವನ್ನುಂಟು ಮಾಡಿದೆ.

    ಆಳ್ವಾಸ್ ವಿರಾಸತ್‌ಗೆ ಭವ್ಯ ಚಾಲನೆ : ಆಳ್ವಾಸ್ ವಿರಾಸತ್ 2027ರ ಉದ್ಘಾಟನಾ ಸಮಾರಂಭ ಜನವರಿ 6ರಂದು ಸಂಜೆ ವೈಭವಪೂರ್ಣವಾಗಿ ನಡೆಯಲಿದೆ. ವೇದಘೋಷ, ಭಜನೆ, ಪುಷ್ಪಪಲ್ಲಕ್ಕಿ ಹಾಗೂ ಮಂಗಳವಾದ್ಯಗಳ ನಾದದೊಂದಿಗೆ ಸಾಂಸ್ಕೃತಿಕ ರಥದ ಮೆರವಣಿಗೆ ನಡೆಯಲಿದ್ದು, ಭಾರತೀಯ ಸಂಸ್ಕೃತಿಯ ವೈವಿಧ್ಯಮಯ ಪರಂಪರೆಗಳು ಈ ಸಂದರ್ಭ ಅನಾವರಣಗೊಳ್ಳಲಿವೆ. ಉದ್ಘಾಟನಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಹರಿದ್ವಾರದಿಂದ ಆಗಮಿಸುವ ಗಂಗಾರತಿ ತಂಡವು ಮಂತ್ರಘೋಷ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ರಥಾರತಿಯನ್ನು ನೆರವೇರಿಸಲಿದೆ. ಇದೇ ಸಂದರ್ಭದಲ್ಲಿ ಶಾಸ್ತ್ರೀಯ ಹಾಗೂ ಜನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಇಬ್ಬರು ಸಾಧಕರಿಗೆ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು. ಜನವರಿ 6ರಿಂದ ಪ್ರತಿದಿನ ಸಂಜೆ 6-00 ಗಂಟೆಯಿಂದ 10-00 ಘಂಟೆಯವರೆಗೆ ಆಳ್ವಾಸ್ ವಿರಾಸತ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಗೀತ, ನೃತ್ಯ, ಶಾಸ್ತ್ರೀಯ ಹಾಗೂ ಜಾನಪದ ಕಲಾ ಪ್ರಕಾರಗಳ ವೈವಿಧ್ಯಮಯ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಲಿವೆ. ಭಾರತೀಯ ಕಲಾ–ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ವಿರಾಸತ್‌ನ ಪ್ರತಿಯೊಂದು ಸಂಜೆಯೂ ಸಾಂಸ್ಕೃತಿಕ ಸಂಭ್ರಮದ ಅನುಭವವನ್ನು ನೀಡಲಿದೆ.

    ಹಸಿರು ಸಂವಾದ : 50 ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆಯ ಹೊಸ ಮಾದರಿ : ಆಳ್ವಾಸ್ ನುಡಿಸಿರಿ–ವಿರಾಸತ್ 2027ರ ಅಂಗವಾಗಿ ಜನವರಿ 6 ಮತ್ತು 7ರಂದು ‘ಹಸಿರು ಸಂವಾದ’ ರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಯಲಿದೆ. ಕರಾವಳಿ ಪರಿಸರ ಸಂರಕ್ಷಣೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಹಾಗೂ ಸಮುದಾಯದ ಸಹಭಾಗಿತ್ವದ ಮೂಲಕ ಸುಸ್ಥಿರ ಪರಿಸರ ವ್ಯವಸ್ಥೆ ರೂಪಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮದಲ್ಲಿ 800ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.

    ತ್ಯಾಜ್ಯವು ನದಿಗಳ ಮೂಲಕ ಸಮುದ್ರ ಸೇರುವುದನ್ನು ತಡೆಯುವ ಉದ್ದೇಶದಿಂದ ಪಾವಂಜೆ (ಗುರುಪುರ), ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶದ 50ಕ್ಕೂ ಅಧಿಕ ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳಲ್ಲಿ ತ್ಯಾಜ್ಯ ವಿಂಗಡಣೆ, ಸಂಗ್ರಹ, ವೈಜ್ಞಾನಿಕ ಸಂಸ್ಕರಣೆ ಹಾಗೂ ಮರುಬಳಕೆಗೆ ಗ್ರಾಮಮಟ್ಟದಲ್ಲಿಯೇ ವ್ಯವಸ್ಥೆ ರೂಪಿಸುವ ಮೂಲಕ ಪರಿಣಾಮಕಾರಿ ಮತ್ತು ಸುಸ್ಥಿರ ತ್ಯಾಜ್ಯ ನಿರ್ವಹಣೆಯ ಮಾದರಿಯನ್ನು ರೂಪಿಸಲಾಗುತ್ತಿದೆ. ಯೋಜನೆಯ ಮೊದಲ ಹಂತದಲ್ಲಿ ಕ್ಷೇತ್ರ ಸಮೀಕ್ಷೆ, ಮಾಹಿತಿ ಸಂಗ್ರಹ, ತ್ಯಾಜ್ಯ ಸಮಸ್ಯೆಗಳ ಮೌಲ್ಯಮಾಪನ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ ಆರಂಭಿಸಲಾಗಿದೆ. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.

    ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ‘ಚೋಟಾ ಕಾಪ್’ ಯೋಜನೆ ರೂಪಿಸಲಾಗಿದೆ. ಯುವಜನರಲ್ಲಿ ಪರಿಸರ ಸ್ನೇಹಿ ಹೊಸ ಆಲೋಚನೆಗಳಿಗೆ ಉತ್ತೇಜನ ನೀಡಲು ಐಡಿಯಾಥಾನ್ ಆರಂಭಿಸಲಾಗಿದ್ದು, ಆಯ್ಕೆಯಾಗುವ ಪರಿಸರ ಸ್ನೇಹಿ ಆವಿಷ್ಕಾರಗಳಿಗೆ ಅಭಿವೃದ್ಧಿ ನಿಧಿಯ ನೆರವು ನೀಡಲಾಗುವುದು. ‘ಹಸಿರು ಸಂವಾದ’ದ ಅಂಗವಾಗಿ ಘನ ತ್ಯಾಜ್ಯ ನಿರ್ವಹಣಾ ನಿಯಮಾವಳಿ–2026ಕ್ಕೆ ಅನುಗುಣವಾಗಿ ತ್ಯಾಜ್ಯ ವಿಂಗಡಣೆ, ಸಂಗ್ರಹ, ವೈಜ್ಞಾನಿಕ ಸಂಸ್ಕರಣೆ ಹಾಗೂ ಮರುಬಳಕೆಯ ಕುರಿತು ಪ್ರಾತ್ಯಕ್ಷಿಕೆಗಳು ಮತ್ತು ಚರ್ಚೆಗಳು ನಡೆಯಲಿವೆ. ಇದರೊಂದಿಗೆ ‘ಸ್ವಚ್ಛ ಗ್ರಾಮ’ ಸ್ಪರ್ಧೆ, ಪರಿಸರ ಜಾಗೃತಿ ರೀಲ್ಸ್ ಸ್ಪರ್ಧೆ, ವಿದ್ಯಾರ್ಥಿ ಚಟುವಟಿಕೆಗಳು ಹಾಗೂ ವಿವಿಧ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.

    ಜನವರಿ 6 ಮತ್ತು 7ರಂದು ನಡೆಯುವ ರಾಷ್ಟ್ರೀಯ ಸಮ್ಮೇಳನದಲ್ಲಿ ಯೋಜನೆಯಲ್ಲಿ ಭಾಗವಹಿಸಿರುವ ಗ್ರಾಮ ಪಂಚಾಯಿತಿಗಳು ತಮ್ಮ ಅನುಭವ ಹಾಗೂ ಸಾಧನೆಗಳನ್ನು ಹಂಚಿಕೊಳ್ಳಲಿವೆ. ದೇಶದ ಪ್ರಮುಖ ಪರಿಸರ ವಿಜ್ಞಾನಿಗಳು, ತಜ್ಞರು ಹಾಗೂ ಪರಿಸರ ಹೋರಾಟಗಾರರು ವಿವಿಧ ವೈಜ್ಞಾನಿಕ ಅಧಿವೇಶನಗಳಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆ, ನದಿ ಮಾಲಿನ್ಯ ನಿಯಂತ್ರಣ ಹಾಗೂ ಸುಸ್ಥಿರ ತ್ಯಾಜ್ಯ ನಿರ್ವಹಣೆ ಕುರಿತು ವಿಚಾರ ವಿನಿಮಯ ನಡೆಸಲಿದ್ದಾರೆ. ಸಮ್ಮೇಳನದ ಸಮಾರೋಪದಲ್ಲಿ ನದಿಗಳಿಗೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಿದ ಗ್ರಾಮಕ್ಕೆ ‘ಸ್ವಚ್ಛ ಗ್ರಾಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ‘ವೇಸ್ಟ್ ವಾರಿಯರ್ಸ್’, ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಪರ್ಧೆಗಳ ವಿಜೇತರನ್ನೂ ಗೌರವಿಸಲಾಗುವುದು.

    ರಾಜ್ಯಮಟ್ಟದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಾಂಸ್ಕೃತಿಕ ಜಂಬೂರಿ : ಆಳ್ವಾಸ್ ನುಡಿಸಿರಿ–ವಿರಾಸತ್ 2027ರ ಅಂಗವಾಗಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯಮಟ್ಟದ ಸಾಂಸ್ಕೃತಿಕ ಜಂಬೂರಿ ಆಯೋಜಿಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 5,000ಕ್ಕೂ ಅಧಿಕ ಸ್ಕೌಟ್ಸ್, ಗೈಡ್ಸ್, ರೋವರ್ಸ್ ಹಾಗೂ ರೇಂಜರ್ಸ್ಗಳು ಜಂಬೂರಿಯಲ್ಲಿ ಭಾಗವಹಿಸಲಿದ್ದಾರೆ. ಯುವಜನರಲ್ಲಿ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಗುಣ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಉದ್ದೇಶದಿಂದ ಜಂಬೂರಿಯಲ್ಲಿ ವಿವಿಧ ತರಬೇತಿ ಹಾಗೂ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಪ್ರತಿದಿನ ಯೋಗ, ಸ್ವಚ್ಛತೆ, ದೇಶಪ್ರೇಮ, ಸೇವಾ ಮನೋಭಾವ, ಕ್ರೀಡಾಸ್ಫೂರ್ತಿ, ಸೌಂದರ್ಯ ಪ್ರಜ್ಞೆ, ಪರಿಸರ ಸಂರಕ್ಷಣೆ ಹಾಗೂ ಶಿಸ್ತು ಸೇರಿದಂತೆ ಹಲವು ವಿಷಯಗಳಿಗೆ ಆದ್ಯತೆ ನೀಡಿ ಪ್ರಾಯೋಗಿಕ ತರಬೇತಿ ನೀಡಲಾಗುವುದು.

    800 ಸಂಗೀತ ಹಾಗೂ ಶಾಸ್ತ್ರೀಯ ಕಲಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರ : ದೇಶೀಯ ಕಲೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 800 ವಿದ್ಯಾರ್ಥಿ ಕಲಾವಿದರಿಗೆ ಉಚಿತ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಶಾಸ್ತ್ರೀಯ ನೃತ್ಯ, ಸಂಗೀತ, ಪಕ್ಕವಾದ್ಯ ಹಾಗೂ ಏಕವ್ಯಕ್ತಿ ಪ್ರದರ್ಶನ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ತರಬೇತಿ ಪಡೆಯುತ್ತಿರುವ ಹಾಗೂ ಪರಿಣತಿ ಹೊಂದಿರುವ ಕಲಾವಿದರು ಇದರಲ್ಲಿ ಭಾಗವಹಿಸಬಹುದಾಗಿದೆ. ರಾಜ್ಯಮಟ್ಟದ ಹಿರಿಯ ಹಾಗೂ ಕಿರಿಯ ಹಂತದ ಕಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ 30 ವರ್ಷದೊಳಗಿನ ವಿದ್ಯಾರ್ಥಿ ಕಲಾವಿದರು ಹಾಗೂ ಹವ್ಯಾಸಿ ಕಲಾವಿದರಿಗೆ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ಯುವ ಕಲಾವಿದರ ಪ್ರತಿಭೆಯನ್ನು ಮತ್ತಷ್ಟು ಬೆಳೆಸುವುದು, ಅವರಿಗೆ ಅನುಭವಿ ಕಲಾವಿದರಿಂದ ಮಾರ್ಗದರ್ಶನ ಒದಗಿಸುವುದು ಹಾಗೂ ದೇಶೀಯ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ.

    ಪ್ರತಿವರ್ಷದಂತೆ ಈ ಬಾರಿಯೂ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ 8 ಜನವರಿ 2027ರಂದು ‘ಆಳ್ವಾಸ್ ವಿದ್ಯಾರ್ಥಿಸಿರಿ’ ಒಂದು ದಿನದ ಸಮ್ಮೇಳನ ನಡೆಯಲಿದೆ. ವಿದ್ಯಾರ್ಥಿಗಳ ಜ್ಞಾನ, ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಈ ಬಾರಿ ಹೊಸ ಪರಿಕಲ್ಪನೆಯಾಗಿ 9 ಜನವರಿ 2027ರಂದು ‘ಆಳ್ವಾಸ್ ಯುವಸಿರಿ’ ಆಯೋಜಿಸಲಾಗುತ್ತಿದೆ. ಪದವಿ, ಸ್ನಾತಕೋತ್ತರ ಹಾಗೂ ವಿವಿಧ ಕ್ಷೇತ್ರಗಳ ಯುವಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಅವರ ಚಿಂತನೆ, ಪ್ರತಿಭೆ ಮತ್ತು ಕನಸುಗಳಿಗೆ ಸ್ಪಂದಿಸುವ ಸಮ್ಮೇಳನವಾಗಿ ಇದನ್ನು ರೂಪಿಸಲಾಗಿದೆ. ನುಡಿಸಿರಿ–ವಿರಾಸತ್‌ನ ವಿಶೇಷ ಆಕರ್ಷಣೆಯಾಗಿ ಕೃಷಿಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಪುಸ್ತಕ ಮೇಳ ಹಾಗೂ ಕಲಾ ಮೇಳಗಳು ನಡೆಯಲಿವೆ.

    ಕೃಷಿಮೇಳದಲ್ಲಿ ಆಧುನಿಕ ಕೃಷಿ ಪದ್ಧತಿ, ಕೃಷಿ ತಂತ್ರಜ್ಞಾನ, ವಿವಿಧ ಬೆಳೆಗಳು ಹಾಗೂ ಕೃಷಿ ಸಂಬಂಧಿತ ಉತ್ಪನ್ನಗಳ ಪರಿಚಯ ಮತ್ತು ಪ್ರದರ್ಶನ ಇರಲಿದೆ. ಅನ್ನದಾತ ರೈತರ ಶ್ರಮಕ್ಕೆ ಗೌರವ ಸಲ್ಲಿಸುವುದರೊಂದಿಗೆ ಕೃಷಿಯ ಹೊಸ ಸಾಧ್ಯತೆಗಳನ್ನು ಪರಿಚಯಿಸುವುದು ಇದರ ಉದ್ದೇಶ. ವಿಜ್ಞಾನ ಮೇಳದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಆಯಾಮಗಳು, ನವೀನ ಆವಿಷ್ಕಾರಗಳು ಹಾಗೂ ವಿದ್ಯಾರ್ಥಿಗಳ ಸೃಜನಶೀಲ ಪ್ರಯತ್ನಗಳು ಪ್ರದರ್ಶನಗೊಳ್ಳಲಿವೆ. ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಮೇಳವನ್ನು ರೂಪಿಸಲಾಗಿದೆ. ಆಹಾರ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳ ಸಾಂಪ್ರದಾಯಿಕ ಮತ್ತು ಸ್ಥಳೀಯ ಆಹಾರ ಸಂಸ್ಕೃತಿಯ ವೈವಿಧ್ಯ ಪರಿಚಯವಾಗಲಿದೆ. ಸ್ಥಳೀಯ ಖಾದ್ಯಗಳು, ಪಾರಂಪರಿಕ ಅಡುಗೆ ಪದ್ಧತಿಗಳು ಹಾಗೂ ವಿವಿಧ ರುಚಿಗಳ ಸವಿಯನ್ನು ಸವಿಯುವ ಅವಕಾಶ ಸಾರ್ವಜನಿಕರಿಗೆ ದೊರೆಯಲಿದೆ. ಪುಸ್ತಕ ಮೇಳದಲ್ಲಿ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಓದುವ ಸಂಸ್ಕೃತಿಯನ್ನು ಉತ್ತೇಜಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ. ಕಲಾ ಮೇಳದಲ್ಲಿ ಚಿತ್ರಕಲೆ, ಕರಕುಶಲ, ಸಾಂಪ್ರದಾಯಿಕ ಕಲೆಗಳು ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದ್ದು, ಕಲಾವಿದರ ಸೃಜನಶೀಲತೆಗೆ ವೇದಿಕೆ ಒದಗಿಸಲಿದೆ.

    ಆಳ್ವಾಸ್ ನುಡಿಸಿರಿ–ವಿರಾಸತ್ 2027ರಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಇಚ್ಛಿಸುವವರು ಐದು ದಿನಗಳಿಗಾಗಿ ರೂ.500 ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜ್ಞಾನಪರ ಕಾರ್ಯಕ್ರಮಗಳ ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

    baikady Cultural dance kannada Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಅಜೆಕಾರು ಕಲಾಭಿಮಾನಿ ಬಳಗದ ರಜತ ಮಹೋತ್ಸವ ‘ಮುಂಬಯಿ ಯಕ್ಷಗಾನ ಸಮ್ಮೇಳನ’
    Next Article ಮನೆ ಮನೆಗಳಲ್ಲಿ ‘ಹೂವಿನಕೋಲು’ ಅಕ್ಟೋಬರ್ 11ರಿಂದ ಅಭಿಯಾನ ಆರಂಭ
    roovari

    Add Comment Cancel Reply


    Related Posts

    ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಹಾಗೂ ಪ್ರಶಸ್ತಿ ಪ್ರದಾನ | ಅಕ್ಟೋಬರ್ 10

    October 9, 2026

    ಆಂಧ್ರಪ್ರದೇಶದಲ್ಲಿ ‘ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ’ | ಅಕ್ಟೋಬರ್ 10

    October 9, 2026

    ರಾಗ ಧನ ಉಡುಪಿ (ರಿ) ಸಂಸ್ಥೆಯ ‘ರಾಗರತ್ನ ಮಾಲಿಕೆ-54’ ಸರಣಿ ಸಂಗೀತ | ಅಕ್ಟೋಬರ್ 11

    October 9, 2026

    ಪಾಂಗೋಡಿನಲ್ಲಿ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026’ | ಅಕ್ಟೋಬರ್ 11ರಿಂದ 20

    October 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.