ಮುಂಬಯಿ : ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ರಜತ ಮಹೋತ್ಸವ ಸಂಭ್ರಮ ಅಂಗವಾಗಿ ದಿನಾಂಕ 03 ಮತ್ತು 04 ಅಕ್ಟೋಬರ್ 2026ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಸಮಾರಂಭವು ಸಂಭ್ರಮದಿಂದ ಜರಗಿತು.
ಈ ಕಾರ್ಯಕ್ರಮವನ್ನು ದಿನಾಂಕ 03 ಅಕ್ಟೋಬರ್ 2026ರಂದು ಉದ್ಘಾಟಿಸಿದ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರವರು ಮಾತನಾಡಿ “ಯಕ್ಷಗಾನವು ನಮ್ಮ ನಾಡಿನ ಶ್ರೀಮಂತ ಕಲೆಯಾಗಿದ್ದು, 40ಕ್ಕೂ ಹೆಚ್ಚು ಮೇಳಗಳು 5,000ಕ್ಕಿಂತಲೂ ಹೆಚ್ಚು ಕಲಾವಿದರು. 25,000ಕ್ಕಿಂತಲೂ ಅಧಿಕ ಹವ್ಯಾಸಿ ಕಲಾವಿದರು ಸೇರಿದಂತೆ ಅದೆಷ್ಟೋ ಮಂದಿ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಶ್ವವ್ಯಾಪಿಯಾಗಿ ಎಲ್ಲರ ಮನ್ನಣೆಗೆ ಪಾತ್ರವಾದ ಯಕ್ಷಗಾನ ಕಲೆಯನ್ನು ರಾಜ್ಯದ ಅಧಿಕೃತ ಕಲೆಯಾಗಿ ಘೋಷಿಸಬೇಕು. ಒಂದು ಕಾಲದಲ್ಲಿ ಗಂಡು ಕಲೆ ಎಂದೇ ಕರೆಯುತ್ತಿದ್ದ ಯಕ್ಷಗಾನವು ಇಂದು ಮಕ್ಕಳು – ಹೆಂಗಳೆಯರೂ ಸೇರಿದಂತೆ ಸರ್ವರಿಗೂ ಪ್ರಿಯವಾದ, ಸರ್ವರೂ ಭಾಗವಹಿಸುವ ಕಲೆಯಾಗಿದೆ. ಇಂದಿನ ಯುವ ಪೀಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಯಕ್ಷಗಾನಕ್ಕೆ ರಾಜ್ಯದ ಕಲೆ ಎಂಬ ಗೌರವ ದೊರೆತರೆ ಮುಂದೆ ಅದನ್ನು ಶಾಸ್ತ್ರೀಯ ಕಲೆಯಾಗಿ ಗುರುತಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಬಹುದಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಎಂ.ಆರ್.ಜಿ. ಗ್ರೂಪಿನ ಡಾ. ಕೆ. ಪ್ರಕಾಶ್ ಶೆಟ್ಟಿ ಇವರು ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಅವರು ಸಮ್ಮೇಳನದ ಸವಿ ಸಂಪುಟ ‘ಯಕ್ಷಗಾನ ಮುಂಬೆಳಗು’ ಗ್ರಂಥವನ್ನು ಬಿಡುಗಡೆಗೊಳಿಸಿ, ಪ್ರಧಾನ ಸಂಪಾದಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ನೇತೃತ್ವದ ಸಂಪಾದಕ ಮಂಡಳಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರ ಸ್ವಂತ ಕೃತಿ ‘ಯಕ್ಷಾಲೋಕ’ ಯಕ್ಷಗಾನ ಸಂಪ್ರಬಂಧಗಳ ಸಂಕಲನವನ್ನು ಡಾ. ಎಂ. ಮೋಹನ ಆಳ್ವ ಬಿಡುಗಡೆಗೊಳಿಸಿದರು. ಭಾಗವತ ಹರೀಶ್ ಶೆಟ್ಟಿ ಸೂಡ ಇವರ ಅರ್ಥಸಹಿತ ಐದು ಪ್ರಸಂಗಗಳ ‘ಯಕ್ಷ ಪಂಚೋಳಿ’ ತುಳು ಕೃತಿಯನ್ನು ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಲೋಕಾರ್ಪಣೆಗೈದರು.

ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವೇದಮೂರ್ತಿ ಹರಿನಾರಾಯಣದಾಸ ಆಸ್ರಣ್ಣರು, “ಭಗವಂತನ ಆರಾಧನ ಕಲೆ ಯಕ್ಷಗಾನವಾಗಿದೆ. ಯಕ್ಷಗಾನದ ಮೂಲಕ ಸಮಾಜಕ್ಕೆ ಸರಿಯಾದ ದಾರಿಯನ್ನು ತೋರಿಸಲಾಗುತ್ತದೆ. ಇಂತಹ ಕಲೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅದರ ಗೌರವವನ್ನು ಉಳಿಸಿ-ಬೆಳೆಸಬೇಕು” ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉದ್ಯಮಿ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಅಮರನಾಥ್ ಶೆಟ್ಟಿ ಅವರು ಮಾತನಾಡಿ “ಅಜೆಕಾರು ಕಲಾಭಿಮಾನಿ ಬಳಗ ಅದೆಷ್ಟೋ ಮಂದಿ ಕಲಾವಿದರನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿದೆ. ಅಂತಹ ಕಲಾವಿದರಿಂದ ಯಕ್ಷಗಾನವು ಮನೆ-ಮನೆಗಳಲ್ಲಿ ಬೆಳೆಯಲಿ” ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಯಕ್ಷಗಾನ ಕಲಾಪೋಷಕ ಡಾ. ಟಿ. ಶ್ಯಾಮ್ ಭಟ್ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಬಾಂಬೆ ಬಂಟ್ಸ್ ಅಸೋಸಿಯೇಶನಿನ ಅಧ್ಯಕ್ಷ ನ್ಯಾಯವಾದಿ ಡಿ.ಕೆ. ಶೆಟ್ಟಿ ಮಾತನಾಡಿ, “ಯಕ್ಷಗಾನವನ್ನು ಉಳಿಸಿ-ಬೆಳೆಸಲು ಇಂತಹ ಸಮ್ಮೇಳನಗಳ ಅಗತ್ಯವಿದೆ. ಇದರಿಂದ ನಮ್ಮ ಯಕ್ಷಗಾನ ಕಲೆಯು ಇನ್ನಷ್ಟು ಶ್ರೀಮಂತಗೊಳ್ಳಲಿ” ಎಂದರು. ಅತಿಥಿ-ಗಣ್ಯರನ್ನು ಅಜೆಕಾರು ಕಲಾಭಿಮಾನಿಗಳ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಸಮಿತಿ ಸದಸ್ಯರೊಂದಿಗೆ ಗೌರವಿಸಿದರು.

ಪ್ರಾರಂಭದಲ್ಲಿ ಸಮ್ಮೇಳನದ ಪ್ರಧಾನ ಸಂಚಾಲಕರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಪ್ರಧಾನ ಸಲಹೆಗಾರ ಡಾ. ಎಂ.ಪ್ರಭಾಕರ ಜೋಶಿ, ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಸಮ್ಮೇಳನ ವೇದಿಕೆಯ ಪ್ರಾಯೋಜಕರಾದ ಡಾ. ಆರ್.ಕೆ. ಶೆಟ್ಟಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್್. ಶೆಟ್ಟಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ರಂಜಿನಿ ಸುಧಾಕರ್ ಹೆಗ್ಡೆ, ‘ಕರ್ನಾಟಕ ಮಲ್ಲ’ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಯಕ್ಷ ಕಲಾರಂಗ ಕಾರ್ಕಳ ಇದರ ಅಧ್ಯಕ್ಷ ವಿಜಯ ಶೆಟ್ಟಿ, ಕನ್ನಡ ಭವನ ಎಜುಕೇಶನ್ ಸೊಸೈಟಿ ಉಪ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಮನ್ ಮೊದಲಾದವರು ಉಪಸ್ಥಿತರಿದ್ದರು. ಉದ್ಘಾಟಕರಾದ ಡಾ. ಎಂ. ಮೋಹನ ಆಳ್ವ, ಸಮ್ಮೇಳನಾಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಮತ್ತು ವಿಶೇಷ ಅತಿಥಿ ಡಾ. ಕೆ. ಪ್ರಕಾಶ್ ಶೆಟ್ಟಿಯವರನ್ನು ಪೇಟ ತೊಡಿಸಿ, ಹಾರವನ್ನು ಹಾಕಿ ನೆನಪಿನ ಕಾಣಿಕೆಯೊಂದಿಗೆ ಅಭೂತ ಪೂರ್ವವಾಗಿ ಸನ್ಮಾನಿಸಲಾಯಿತು.

ಉದ್ಘಾಟನಾ ಸಮಾರಂಭಕ್ಕಿಂತ ಮೊದಲು ಬಂಟರ ಸಂಘದ ಶ್ರೀಮತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಪ್ರಧಾನ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಸಾಂಕೇತವಾಗಿ ದೀಪ ಬೆಳಗಿಸಿದರು. ಬಳಿಕ ಯಕ್ಷಗಾನದ ಸಾಂಪ್ರದಾಯಿಕ ‘ಕೇಳಿ’ ಬಾರಿಸಲಾಯ್ತು. ಸಂಘದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭವ್ಯ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ದಿ. ಕಲ್ಲಾಡಿ ವಿಠಲ ಶೆಟ್ಟಿ ಹೆಸರಿನ ಸಮ್ಮೇಳನಾಂಗಣದಲ್ಲಿ ಸೂರಿಕುಮೇರು ಗೋವಿಂದ ಭಟ್ ಮಹಾದ್ವಾರವನ್ನು ಉದ್ಘಾಟಿಸಿದ ಅತಿಥಿ ಗಣ್ಯರನ್ನು ದಿ. ಹೆಚ್.ಬಿ.ಎಲ್. ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ದ್ವಾರಗಳ ಮೂಲಕ ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ ಸಭಾಂಗಣಕ್ಕೆ ಕರೆತರಲಾಯಿತು. ಡಾ. ಆರ್.ಕೆ. ಶೆಟ್ಟಿ ಯಕ್ಷಕಲಾ ವೇದಿಕೆಯಲ್ಲಿ ‘ಅಬ್ಬರ ತಾಳ’ದೊಂದಿಗೆ ಉದ್ಘಾಟನಾ ಸಮಾರಂಭ ಜರಗಿತು. ತವರೂರ ಭಾಗವತ ದೇವಿ ಪ್ರಸಾದ್ ಆಳ್ವ ತಲಪಾಡಿ ಮತ್ತು ತಂಡದವರು ಯಕ್ಷಗಾನ ಧಾಟಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಮಿತಿಯ ದೀವಿತ್ ಎಸ್.ಕೆ. ಪೆರಾಡಿ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಕಾರ್ಯದರ್ಶಿಗಳಾದ ಅಶೋಕ ಪಕ್ಕಳ, ಕರ್ನೂರ್ ಮೋಹನ ರೈ ಮತ್ತು ಅಮೃತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

“ಪ್ರಕೃತಿ ಸೌಂದರ್ಯವನ್ನು ಹೊಂದಿದ ತುಳುನಾಡು ನಮ್ಮದು. ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ದೇಶ ವಿದೇಶಗಳಿಂದ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ನಮ್ಮ ಯುವ ಪ್ರತಿಭೆಗಳು ಶಿಕ್ಷಣವನ್ನು ಪಡೆದು ತುಳುನಾಡಿನಿಂದ ಹೊರಗೆ ಹೋಗುತ್ತಿರುವುದು ವಿಷಾದನೀಯ. ಈ ಬಗ್ಗೆ ನಾವು ಚಿಂತಿಸಬೇಕಾಗಿದೆ. ನಮ್ಮ ಊರಿನಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕಡೆಗೆ ಗಮನ ಹರಿಸಬೇಕು. ಈ ಬಗ್ಗೆ ಸರಕಾರ ಗಮನ ಹರಿಸಬೇಕು. ನಮ್ಮ ಶ್ರೀಮಂತ ಕಲೆಯಾದ ಯಕ್ಷಗಾನವನ್ನು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಮುಂಬಯಿ ಮಹಾ ನಗರದಲ್ಲಿ ಉಳಿಸಿ- ಬೆಳೆಸುವಂಥ ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯ” –ಡಾ. ಕೆ. ಪ್ರಕಾಶ್ ಶೆಟ್ಟಿ ಸಂಸ್ಥಾಪಕ ಕಾರ್ಯಾಧ್ಯಕ್ಷ ಆರ್.ಆರ್.ಜಿ. ಗ್ರೂಪ್.
“ಎರಡು ದಿನಗಳ ಕಾಲ ಬಾಲಕೃಷ್ಣ ಶೆಟ್ಟಿ ಅವರು ಯಕ್ಷಗಾನ ಸಮ್ಮೇಳನವನ್ನು ಮಾಡುತ್ತಿರುವುದು ಮುಂಬಯಿಗರಾದ ನಮಗೆ ಹೆಮ್ಮೆಯ ವಿಷಯವಾಗಿದೆ. ಯಕ್ಷಗಾನಕ್ಕೆ ಮುಂಬಯಿ ಮಹಾನಗರದಲ್ಲಿ ಸಂಪೂರ್ಣ ಸಹಕಾರ ಪ್ರೋತ್ಸಾಹ ನೀಡುತ್ತಾರೆ. ಇಲ್ಲಿ ಕಲಾವಿದರನ್ನು ಬೆಳೆಸುವ ಕಾರ್ಯವು ನಿರಂತರವಾಗಿ ನಡೆಯುತ್ತಿದೆ. ಈ ಎರಡು ದಿನದ ಕಾರ್ಯಕ್ರಮದಲ್ಲಿ ಯಕ್ಷಗಾನದ ಬಗ್ಗೆ ಚಿಂತನ ಮಂಥನ ನಡೆದು ಈ ಸಮ್ಮೇಳನ ಯಶಸ್ವಿಯಾಗಬೇಕು ಎಂಬುವುದೇ ನಮ್ಮೆಲ್ಲರ ಆಶಯವಾಗಿದೆ. – ಪ್ರವೀಣ್ ಬಿ. ಶೆಟ್ಟಿ ಅಧ್ಯಕ್ಷ, ಬಂಟರ ಸಂಘ ಮುಂಬಯಿ.

ಮೊದಲ ದಿನದ ಸಮ್ಮೇಳನದಲ್ಲಿ ಮುಂಬೈ ಯಕ್ಷಗಾನ: ಒಂದು ಅವಲೋಕನ, ಮಹಿಳಾ ಮತ್ತು ಮಕ್ಕಳ ಯಕ್ಷಗಾನ, ಅರ್ಥಗಾರಿಕೆ: ಸ್ವರೂಪ ಮತ್ತು ವಿಸ್ತರಣೆ ಎಂಬ ಮೂರು ಪ್ರಮುಖ ಗೋಷ್ಠಿಗಳು ಜರಗಿದವು. ಡಾ. ವೈ.ವಿ. ಮಧುಸೂಧನ ರಾವ್, ಗೀತಾ ಎಲ್. ಭಟ್, ಕೋಲ್ಯಾರು ರಾಜು ಶೆಟ್ಟಿ, ಡಾ. ಆರತಿ ಪಟ್ರಮೆ, ದೀವಿತ್ ಎಸ್.ಕೆ. ಪೆರಾಡಿ, ಜಬ್ಬಾರ್ ಸಮೋ ಸಂಪಾಜೆ, ಗಣರಾಜ ಕುಂಬಳೆ, ಎಂ.ಕೆ. ರಮೇಶ ಆಚಾರ್ಯ ಮತ್ತು ಸದಾಶಿವ ಆಳ್ವ ತಲಪಾಡಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಉದ್ಘಾಟನೆಯ ಬಳಿಕ ಉಡುಪಿಯ ‘ಥಿಯೇಟರ್ ಯಕ್ಷ’ ಬಳಗದಿಂದ ಪೃಥ್ವಿರಾಜ್ ಕವತ್ತಾರು ಅವರ ನಿರ್ದೇಶನದಲ್ಲಿ ತೆಂಕುತಿಟ್ಟಿನ ಸಂಕ್ಷಿಪ್ತ ಪೂರ್ವರಂಗ ಮತ್ತು ‘ಪಂಪಾತೀರ’ ಕಥಾನಕ ಪ್ರಸ್ತುತಿ, ದಿವಾಕರ ರೈ ಸಂಪಾಜೆ ಮತ್ತು ಪ್ರಶಾಂತ ಶೆಟ್ಟಿ ನೆಲ್ಯಾಡಿ ಇವರಿಂದ ಯಕ್ಷನಾಟ್ಯ, ಪ್ರಸಿದ್ಧ ಅರ್ಥಧಾರಿಗಳ ಕೂಡುವಿಕೆಯಲ್ಲಿ ‘ಬೀರಸಿರಿತ ಗಾಂಡೀವಿ’ ತುಳು ತಾಳಮದ್ದಳೆ, ಬನ್ನಂಜೆ ಸಂಜೀವ ಸುವರ್ಣ ಇವರ ನಿರ್ದೇಶನದಲ್ಲಿ ‘ಚಕ್ರವ್ಯೂಹ’ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ಜರಗಿತು. ಸಂಜೆಯ ಸಮಾರಂಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಕಲಾ ಗೌರವ, ರಜತ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಮತ್ತು ಸಂಘ ಸಂಸ್ಥೆಗಳಿಗೆ ರಜತ ಗೌರವಾರ್ಪಣೆ ಜರಗಿತು.
