ಮಂಗಳೂರು : ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಯೋಗದಲ್ಲಿ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ’ ಸರಣಿಯ 16ನೇ ಕಾರ್ಯಕ್ರಮವು ದಿನಾಂಕ 07 ಆಗಸ್ಟ್ 2026ರಂದು ತುಳು ಭವನ ಸಿರಿಚಾವಡಿಯಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಂಶೋಧಕ ಹಾಗೂ ತುಳು ಅಕಾಡೆಮಿ ಮಾಜಿ ಸದಸ್ಯ ಬೆನೆಟ್ ಜಿ.ಅಮ್ಮನ್ನ “ಪ್ರತಿಯೊಬ್ಬ ತುಳುವರ ಮನೆಯಲ್ಲಿ ತುಳು ಪುಸ್ತಕ ಓದುವಂತಾಗಬೇಕು, ಪ್ರತಿಯೊಬ್ಬ ತುಳುವರು ತಮ್ಮ ಮನೆಗೊಂದು ತುಳು ಪುಸ್ತಕವನ್ನು ಖರೀದಿಸಿ, ತುಳು ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ಮಾತನಾಡಿ, “ಯುವ ಜನತೆಗೆ ತುಳು ಭಾಷೆಯ ಮೇಲೆ, ತುಳು ಸಾಹಿತ್ಯದ ಮೇಲೆ ಅಭಿಮಾನ ಮತ್ತು ಪ್ರೀತಿ ಮೂಡಿಸುವ ಬಲೆ ತುಳು ಓದುಗ ಕಾರ್ಯಕ್ರಮ ಅಭಿನಂದನಾರ್ಹ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, “ಓದುವ ಸಲುವಾಗಿ ನಡೆಯುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗವಹಿಸುತ್ತಾರೆ ಹಾಗೂ ಆಸಕ್ತಿಯಿಂದ ಓದುತ್ತಾರೆ” ಎಂದರು.\

ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಹಾಗೂ ಅಕಾಡೆಮಿ ಮಾಜಿ ಸದಸ್ಯ ಡಾ. ದಿವಾ ಕೊಕ್ಕಡ ಮತ್ತು ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರವಿಶಂಕರ ಜಿ.ಕೆ. ಶುಭ ಕೋರಿ ಮಾತನಾಡಿದರು. ವಿದ್ಯಾರ್ಥಿ ಸಂಚಾಲಕರಾದ ಸುಹಾ ಫಾತಿಮಾ, ಅಕಾಡೆಮಿಯ ಸದಸ್ಯರಾದ ಕುಂಬ್ರ ದುರ್ಗಾಪ್ರಸಾದ್ ರೈ, ಬೂಬ ಪೂಜಾರಿ ಮಳಲಿ, ಅಕ್ಷಯ ಆರ್. ಶೆಟ್ಟಿ ಉಪಸ್ಥಿತರಿದ್ದರು. ಸಂಜೆಯ ಸಮಾರೋಪದಲ್ಲಿ ವಿದ್ಯಾರ್ಥಿಗಳು ತಾವು ಓದಿದ ಪುಸ್ತಕದ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಅಕಾಡೆಮಿ ಸದಸ್ಯ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿ, ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ವಂದಿಸಿದರು.
