ಸಂಗೀತಗಾರರ ಮನೆತನದಲ್ಲಿ ಅಗಸ್ತ್ಯ ಗೌಡ ಮತ್ತು ಸುಂದರಮ್ಮ ದಂಪತಿಗಳ ಸುಪುತ್ರನಾಗಿ 1905 ಜುಲೈ 9ರಂದು ತಿರುಮಕೂಡಲು ನರಸೀಪುರದಲ್ಲಿ ಟಿ. ಗುರುರಾಜಪ್ಪ ಎಂದೇ ಪ್ರಸಿದ್ಧರಾದ ತಿರುಮಕೂಡಲು ಗುರುರಾಜಪ್ಪ ಜನಿಸಿದರು. ಪಿಟೀಲುವಾದನದಲ್ಲಿ ಹೆಸರುವಾಸಿಯಾದ ಟಿ. ಚೌಡಯ್ಯ ಇವರ ಹಿರಿಯ ಸಹೋದರ. ಚೌಡಯ್ಯನವರು ಎಷ್ಟು ಪ್ರಸಿದ್ಧರೆಂದರೆ ಬೆಂಗಳೂರಿನ ವೈಯ್ಯಾಲಿಕಾವಲ್ ನಲ್ಲಿ ನಿರ್ಮಾಣವಾದ ಒಂದು ಸ್ಮಾರಕ ಭವನವು ಇವರ ಹೆಸರಿನಲ್ಲಿ ಇರುವುದು ಮಾತ್ರವಲ್ಲದೆ ಅದೂ ಪಿಟೀಲಿನ ಆಕಾರದಲ್ಲಿಯೇ ಇರುವುದು ವಿಶೇಷತೆ.
ಇಂತಹ ಪ್ರಸಿದ್ಧ ಸಂಗೀತ ಮನೆತನದಲ್ಲಿ ಜನಿಸಿದ ಟಿ. ಗುರುರಾಜಪ್ಪನವರು ಎಸ್.ಎಸ್.ಎಲ್.ಸಿ.ಯ ನಂತರ ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲುವಾದನದ ಅಭ್ಯಾಸ ನಡೆಸಿ, ಅಣ್ಣ ಟಿ. ಚೌಡಯ್ಯನವರ ಜೊತೆಗೆ ದೇಶದಾದ್ಯಂತ ದ್ವಂದ್ವ ಪಿಟೀಲುವಾದನ ಕಚೇರಿ ನಡೆಸಿದ ಖ್ಯಾತರು. ಅನೇಕ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಪಿಟೀಲುವಾದನ ಮಾಡಿದ ಇವರು ಪ್ರಸಿದ್ಧ ಸಂಗೀತಗಾರರಾದ ಅರಿಯಾಕುಡಿ ರಾಮಾನುಜ ಅಯ್ಯರ್, ಚಂಬೈ ವೈದ್ಯನಾಥ ಭಾಗವತರ್, ಅಲತ್ತೂರು ಸಹೋದರರು ಮುಂತಾದವರ ಸಂಗೀತ ಕಚೇರಿಗಳಿಗೆ ಪಿಟೀಲುವಾದನದ ಪಕ್ಕ ವಾದ್ಯ ನೀಡಿದ ಹೆಗ್ಗಳಿಕೆ ಪಡೆದವರು ಮತ್ತು ಪ್ರಸಿದ್ಧ ಸಂಗೀತಗಾರರಾದ ಎಂ.ಎಸ್. ಸುಬ್ಬಲಕ್ಷ್ಮಿಯವರ ಮೊದಲ ಸಾರ್ವಜನಿಕ ಸಂಗೀತ ಕಚೇರಿಗೆ ಪಿಟೀಲುವಾದನ ಮಾಡಿ ಮೆಚ್ಚುಗೆ ಪಡೆದ ಖ್ಯಾತಿ ಇವರದು.
1939ರಲ್ಲಿ ತಿರುಚರಪಳ್ಳಿ ಆಕಾಶವಾಣಿಯ ‘ಎ’ ದರ್ಜೆಯ ಕಲಾವಿದರಾದುದು ಮಾತ್ರವಲ್ಲದೆ, 1953ರಲ್ಲಿ ಮೈಸೂರು ಆಕಾಶವಾಣಿ ಕಲಾವಿದರಾದದ್ದು, 1957ರಲ್ಲಿ ಬೆಂಗಳೂರು ಆಕಾಶವಾಣಿಯ ‘ಎ’ ದರ್ಜೆಯ ಕಲಾವಿದರಾಗಿ ಆಯ್ಕೆಗೊಂಡದ್ದು, ಪಿಟೀಲು ವಾದನದಲ್ಲಿ ಇವರಿಗಿದ್ದ ಆಳವಾದ ಜ್ಞಾನಕ್ಕೆ ಸಾಕ್ಷಿಯಾಗಿದೆ. ಗುರುಕುಲ ಪದ್ದತಿಯಲ್ಲಿ ಸಂಗೀತ ಶಿಕ್ಷಣ ನೀಡಿ ಪ್ರಸಿದ್ಧರಾದ ಟಿ. ಗುರುರಾಜಪ್ಪನವರು ಪಿಟೀಲುವಾದನದಲ್ಲಿ ಶ್ರೇಷ್ಟರಾದ ಮಧುರೆ ವೇಣುಗೋಪಾಲ್, ಕಿಳಿನಲ್ಲೂರು ರಂಗಸ್ವಾಮಿ, ನಟರಾಜನ್ ಮತ್ತು ವೈದ್ಯನಾಥನ್ ಮುಂತಾದ ಪ್ರಸಿದ್ಧ ಕಲಾವಿದರನ್ನು ನಾಡಿಗೆ ನೀಡಿದ್ದಾರೆ.
ತಮಿಳುನಾಡಿನಾದ್ಯಂತ ನಡೆದ ಸಂಗೀತ ಕಚೇರಿಗಳಲ್ಲಿ ಪಿಟೀಲುವಾದನ ನಡೆಸಿದಾಗ, ವಜ್ರದ ಕಾಪು ತೊಡಿಸಿ, ಸನ್ಮಾನ ಮಾಡಿ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮಿಳುನಾಡಿನ ಸಂಗೀತ ಪ್ರೇಮಿಗಳು ವಜ್ರದುಂಗುರವನ್ನು ನೀಡಿ ಇವರನ್ನು ಸನ್ಮಾನಿಸಿದ್ದು ಇವೆಲ್ಲ ಟಿ. ಗುರುರಾಜಪ್ಪನವರ ಪ್ರತಿಭೆಗೆ ಸಂದ ಗೌರವ. ಇವರ ಪಿಟೀಲುವಾದನದ ಪ್ರತಿಭೆ ದೇಶದೊಳಗಿನ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರದೆ, ಗಣ್ಯ ಸಂಗೀತಗಾರದೊಂದಿಗೆ ಸಂಗೀತದ ಪಕ್ಕವಾದ್ಯಕ್ಕಾಗಿ ಸಿಲೋನ್, ಸಿಂಗಾಪುರ್ ಮತ್ತು ಇಂಗ್ಲೆಂಡ್ ಮುಂತಾದ ದೇಶಗಳನ್ನು ಸಂದರ್ಶಿಸಿ, ಕಚೇರಿ ನೀಡಿದ ಅಪ್ರತಿಮ ಪ್ರತಿಭೆ ತಿರುಮಕೂಡಲು ಗುರುರಾಜಪ್ಪ.
ಪಿಟೀಲುವಾದನದಲ್ಲಿ ಪ್ರಖ್ಯಾತರಾಗಿ, ಹಲವಾರು ಶ್ರೇಷ್ಠ ಪಿಟೀಲುವಾದಕರನ್ನು ಸಂಗೀತ ಲೋಕಕ್ಕೆ ನೀಡಿ, ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಟಿ. ಗುರುರಾಜಪ್ಪನವರು 1972 ಮೇ 12ರಂದು ಸಂಗೀತ ಲೋಕಕ್ಕೆ ಮಾತ್ರವಲ್ಲ ಇಹಕ್ಕೇ ವಿದಾಯವನ್ನು ಹೇಳಿದರು.
ಸಂಗೀತ ಪ್ರೇಮಿಗಳು, ಸಂಗೀತ ಆಸಕ್ತರು ಎಲ್ಲರೂ ತಿರುಮಲಕೂಡು ಗುರುರಾಜಪ್ಪನವರ ಜನ್ಮದಿನವಾದ ಇಂದು ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕಾಣಿಕೆಯನ್ನು ಪ್ರೀತಿ-ಶ್ರದ್ಧೆಯಿಂದ ಸ್ಮರಿಸೋಣ.
• ಅಕ್ಷರೀ
