ಮುಂಬಯಿ ಕನ್ನಡದ ಲೇಖಕಿ ಲತಾ ಸಂತೋಷ್ ಶೆಟ್ಟಿಯವರು ಹೆಸರಾಂತ ಅಂಕಣ ಬರಹಗಾರ್ತಿ. ಇವರು ಬರೆದ ‘ಬಾಂಧವ್ಯ’ ಕಾದಂಬರಿ ಹೆಗ್ಗದ್ದೆ ಪ್ರಕಾಶನದ ಮೂಲಕ ಪ್ರಕಟಗೊಂಡಿದೆ. ತುಸು ದೊಡ್ಡದೆಂದೇ ಹೇಳಬಹುದಾದ ಈ ಕಾದಂಬರಿಯಲ್ಲಿ 394 ಪುಟಗಳಿವೆ. ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯಕ್ಕೆ ಸೇರಿದ ಶ್ರೀಮಂತ ಜಮೀನ್ದಾರಿ ಕೂಡು ಕುಟುಂಬಗಳು ‘ಗುತ್ತು’ ಎಂಬ ವಿಶೇಷ ವಿನ್ಯಾಸದ ಬೃಹತ್ ಗಾತ್ರದ ಮನೆಯಲ್ಲಿ ವೈಭವದ ಜೀವನವನ್ನು ನಡೆಸುತ್ತಿದ್ದ ಕಾಲದಿಂದ ಹಿಡಿದು ಬದಲಾದ ಆಧುನಿಕತೆಯ ಕಾಲಕ್ಕಾಗುವಾಗ ಅದರ ಸಂಪೂರ್ಣ ಅವನತಿಯ ಕಾಲದ ತನಕ ಕಾದಂಬರಿಯ ಕ್ಯಾನ್ ವಾಸ್ ಹರಡಿಕೊಂಡಿದೆ. ಗುತ್ತು ಅನ್ನುವ ಐತಿಹಾಸಿಕ ಮನೆಯ ಜೀವನ ಶೈಲಿಯ ಪೂರ್ತಿ ವಿವರಗಳನ್ನು ಸಂದರ್ಭೋಚಿತವಾಗಿ ಲೇಖಕಿ ಕೊಡುತ್ತಾ ಹೋಗುತ್ತಾರೆ.
ಗುತ್ತಿನ ಮನೆಯವರ ಕೈಯಲ್ಲಿ ಇಡೀ ಊರಿನ ಮೇಲಿನ ಅಧಿಕಾರ ಹೇಗಿದೆಯೋ ಅವರನ್ನು ಪ್ರೀತಿಯಿಂದ ಕಾಪಾಡುವ ಜವಾಬ್ದಾರಿಯೂ ಇದೆ. ತಲೆತಲಾಂತರಗಳಿಂದ ಬಂದ ‘ಗುತ್ತಿನಾರ್’ ಎಂಬ ಸ್ಥಾನದಲ್ಲಿ ಕಥೆ ಆರಂಭವಾಗುವ ಕಾಲದಲ್ಲಿ ರಾಮಣ್ಣ ಇದ್ದಾರೆ. ಊರಿನ ಎಲ್ಲರಿಗೂ ಉಪಕಾರಿಯಾಗಿರುವ ಅವರು ಪಟೇಲರಾಗಿ ಎಲ್ಲರ ಗೌರವಕ್ಕೆ ಪಾತ್ರನಾಗಿದ್ದಾರೆ. ಆದರೆ ದುರದೃಷ್ಟವಶಾತ್ ಸ್ವಾತಂತ್ರ್ಯ ಪಡೆದ ಸರಕಾರವು ಚುನಾವಣೆಯ ಮೂಲಕ ಗ್ರಾಮ ಪಂಚಾಯಿತಿ ನಿರ್ಮಿಸುತ್ತದೆ ಮತ್ತು ಇನ್ನು ಮುಂದೆ ಪಟೇಲರ ಅಗತ್ಯವಿಲ್ಲ ಎಂಬ ಘೋಷಣೆ ಹೊರಡಿಸಿದಾಗ ಗುತ್ತಿನಾರ್ ಗ್ರಾಮದ ಮೇಲಿನ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಗಾಯದ ಮೇಲೆ ಬರೆ ಎಳೆದಂತೆ ಕೆಲವು ವರ್ಷಗಳ ನಂತರ ಸರಕಾರವು ಭೂಮಸೂದೆಯನ್ನು ಜ್ಯಾರಿಗೆ ತಂದು ‘ಉಳುವವನೇ ಹೊಲದೊಡೆಯ’ ಎಂದು ಘೋಷಿಸಿದಾಗ ಗುತ್ತಿನಾರ್ ಗೇಣಿಗೆ ಕೊಟ್ಟ ಮುಕ್ಕಾಲು ಪಾಲು ಹೊಲಗದ್ದೆಗಳು ಒಕ್ಕಲುಗಳ ವಶವಾಗುತ್ತವೆ. ಗತ್ತಿನಲ್ಲಿ ಕಳೆದ ಗುತ್ತಿನ ಮನೆಯವರು ಒಪ್ಪೊತ್ತಿನ ಊಟಕ್ಕೂ ಕಷ್ಟಪಡಬೇಕಾಗಿ ಬರುತ್ತದೆ.
ಆದರೆ ಗುತ್ತಿನಾರ್ ಎದೆಗುಂದುವುದಿಲ್ಲ. ಹಿರಿಯ ಮಗ ಕರುಣಾಕರ ತಾನು ಇದ್ದಬದ್ದ ಭೂಮಿಯಲ್ಲೇ ಕೃಷಿ ಮಾಡಿ ತಮ್ಮ ತಂಗಿಯರನ್ನು ನೋಡಿಕೊಳ್ಳುವೆನೆಂದು ಹೇಳುತ್ತಾನೆ. ಆದರೆ ಒಕ್ಕಲುಗಳಲ್ಲಿ ಒಬ್ಬನ ಮಗ ಸದಾಶಿವ ಎಂಬವನು ಆಗಲೇ ಮುಂಬಯಿಗೆ ಹೋಗಿ ಅಲ್ಲಿ ತನ್ನ ಚಾಕಚಕ್ಯತೆಯಿಂದ ಒಳ್ಳೆಯ ರೀತಿಯಲ್ಲಿ ನೆಲೆಗೊಂಡವನು ಕರುಣಾಕರನನ್ನೂ ತನ್ನೊಂದಿಗೆ ಕರೆದೊಯ್ದು ಅಲ್ಲಿ ಇಲ್ಲಿ ಹುಡುಕಾಡಿ ಒಬ್ಬ ಗುಜರಾತಿಯ ಹೋಟೆಲ್ ನಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತುಕೊಳ್ಳಲು ಕ್ಯಾಷಿಯರ್ ಕೆಲಸ ಕೊಡಿಸುತ್ತಾನೆ. ಇಲ್ಲಿಂದ ಗುತ್ತಿನಾರ್ ಕುಟುಂಬದ ಜೀವನದ ಹೊಸ ಪರ್ವ ಅರಂಭವಾಗುತ್ತದೆ. ನಗರ ಜೀವನಕ್ಕೆ ಹೊಂದಿಕೊಂಡ ಕರುಣಾಕರ ಪ್ರಾಮಾಣಿಕವಾಗಿ ದುಡಿಯುವುದರೊಂದಿಗೆ ಹಣ ಮಾಡುವ ಅಡ್ಡದಾರಿಯನ್ನೂ ಧನಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಂಡುಕೊಳ್ಳುತ್ತಾನೆ. ಅವನ ತಂಗಿಯರಾದ ಸೌಮ್ಯ ಮತ್ತು ಸೌಜನ್ಯ ಕಾಲೇಜಿನಲ್ಲಿ ಚೆನ್ನಾಗಿ ಓದುತ್ತಾರಲ್ಲದೆ ಹೊಲದಲ್ಲೂ ಬೆವರು ಸುರಿಸಿ ದುಡಿದು ಕೃಷಿ ಕ್ಷೇತ್ರದಲ್ಲೂ ಸೈ ಅನ್ನಿಸಿಕೊಳ್ಳುತ್ತಾರೆ. ಸೌಮ್ಯಳಿಗೆ ಒಳ್ಳೆಯ ಸರಕಾರಿ ಉದ್ಯೋಗ ಸಿಗುತ್ತದೆ. ಅಕ್ಕ-ತಂಗಿಯರಿಬ್ಬರಿಗೂ ಒಳ್ಳೆಯ ರೀತಿಯಲ್ಲಿ ಮದುವೆಯೂ ಆಗುತ್ತದೆ. ತಮ್ಮ ದಯಾನಂದನಿಗೂ ಸದಾಶಿವನ ಸಹಾಯದಿಂದ ಮುಂಬಯಿನಲ್ಲೇ ಒಂದು ಬ್ಯಾಂಕಿನಲ್ಲಿ ಕೆಲಸ ಸಿಗುತ್ತದೆ.
ಕಾದಂಬರಿಯ ಕೊನೆಯ ಭಾಗದ ತನಕ ಎಲ್ಲಿಯೂ ಸಂಘರ್ಷವಿಲ್ಲದೆ ಜೀವನವು ಸುಗಮವಾಗಿ ಸಾಗುವುದನ್ನು ನೋಡಬಹುದು. ಸೌಜನ್ಯ ಗಂಡನ ಜತೆಗೆ ಅಮೇರಿಕಾ ಸೇರಿದಾಗ ಗುತ್ತಿನಾರ್ ಕೆಲಸದಲ್ಲಿರುವ ಸೌಮ್ಯ ಮತ್ತು ಅವಳ ಗಂಡ-ಮಗು ಗುತ್ತಿನ ಮನೆಗೆ ಬಂದು ತಮ್ಮ ಜತೆಗೆ ಇರುವಂತೆ ಹೇಳುತ್ತಾರೆ. ಅದಕ್ಕೆ ಸೌಮ್ಯ-ಸುದರ್ಶನ ಒಪ್ಪದೇ ಇದ್ದಾಗ ಅವರ ನಡುವೆ ಸಂಘರ್ಷ ಏರ್ಪಡುತ್ತದೆ. ಗುತ್ತಿನಾರ್ ಮತ್ತು ಅವರ ಹೆಂಡತಿ ಮಕ್ಕಳ ಬಗ್ಗೆ ಜುಗುಪ್ಸೆ ತಾಳುತ್ತಾರೆ. ಇದು ಗಂಭೀರವಾಗುತ್ತ ಹೋಗುತ್ತದೆ.
ಕರುಣಾಕರನಿಗೂ ಗುತ್ತಿನ ಕುಟುಂಬಕ್ಕೆ ಸೇರಿದ ಸೌದಾಮಿನಿಯೊಂದಿಗೆ ವಿವಾಹವಾಗಿ ಅವರಿಬ್ಬರೂ ಮುಂಬಯಿನಲ್ಲಿ ತಮ್ಮನ ಬ್ಯಾಂಕಿನ ಮೂಲಕ ತೆಗೆದ ಸಾಲದ ಸಹಾಯದಿಂದ ಮನೆ ಕೊಂಡುಕೊಂಡು ಅಲ್ಲಿ ಮೂವರೂ ವಾಸಿಸತೊಡಗುತ್ತಾರೆ. ಅಲ್ಲಿ ಕೆಲವು ಕಾಲದ ನಂತರ ದಯಾನಂದ ಕೈಯಲ್ಲಿ ಧಾರಾಳ ಹಣವಿರುವ ಕಾರಣ ಅಹಂಕಾರಿಯಾಗಿ ಕೆಟ್ಟ ಚಟಗಳಿಗೆ ಬೀಳುತ್ತಾನೆ. ಅತ್ತಿಗೆಯ ಮೇಲೆ ಕಣ್ಣು ಹಾಕುತ್ತಾನೆ. ಇಲ್ಲಿಂದ ನಂತರ ಕುಟುಂಬದಲ್ಲಿ ಬಿರುಕು ಮೂಡುತ್ತದೆ. ದಯಾನಂದ ತನಗಿಷ್ಟ ಬಂದ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗದ ನಂತರ ಅಣ್ಣ-ತಮ್ಮಂದಿರ ನಡುವಣ ವೈಮನಸ್ಸು ಆಳವಾಗುತ್ತದೆ.
ಕಾದಂಬರಿಯ ಕೊನೆಯ ಭಾಗದಲ್ಲಿ ಗುತ್ತಿನಾರ್ ಮರಣಶಯ್ಯೆಯಲ್ಲಿ ಮಲಗಿದ ದೃಶ್ಯದ ಚಿತ್ರಣವಿದೆ. ತಾಯ್ತಂದೆ-ಮಕ್ಕಳ ನಡುವೆ ಉಂಟಾದ ಬಿರುಕು ಮತ್ತು ಮೌನಗಳು ಓದುಗನ ಮನಕಲಕುತ್ತವೆ. ಮಕ್ಕಳು ದೂರವಾದರೂ ಅವರು ಹಿಂದೆ ಮಾಡಿದ ಸತ್ಕಾರ್ಯಗಳಿಂದಾಗಿ ಅವರ ಬಂಧು ಬಳಗ ಅವರ ಜತೆಯಲ್ಲಿರುತ್ತದೆ. ಗುತ್ತಿನಾರ್ ಮರಣಾ ನಂತರ ಬಂಧು-ಬಳಗದವರು ಅವರ ಆಸ್ತಿಯ ಮನೆಯ ಹೆಣ್ಣುಮಕ್ಕಳಿಗೆ ಹೋಗಬೇಕು ಎನ್ನುವ ಪರಂಪರಾಗತ ಪದ್ಧತಿಯಂತೆ ಸೌಮ್ಯ ಮತ್ತು ಸೌಜನ್ಯ ಊರಿಗೆ ಬಂದು ನೆಲೆಯೂರಲು ಸಾಧ್ಯವಿಲ್ಲವೆಂದು ಹೇಳಿದ್ದರಿಂದ ಕರುಣಾಕರನ ಹೆಂಡತಿ ಸೌದಾಮಿನಿಯ ಹೆಸರಿಗೆ ಬರೆಯಲಾಗುತ್ತದೆ. ಕೊನೆಯಲ್ಲಿ ಕರುಣಾಕರ ಮತ್ತು ಸೌದಾಮಿನಿ ಮುಂಬಯಿ ಬಿಟ್ಟು ಊರಿಗೆ ಬಂದು ಗುತ್ತಿನಲ್ಲಿ ನೆಲೆಸುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.
ಕಾದಂಬರಿಯುದ್ದಕ್ಕೂ ಗುತ್ತಿನ ಮನೆತನದವರ ಜೀವನ ಶೈಲಿ, ಆಚಾರ-ವಿಚಾರಗಳು, ಆಹಾರ-ವಿಹಾರಗಳು, ಪದ್ಧತಿ-ಪರಂಪರೆಗಳು, ಇಟ್ಟುಕೊಂಡ ನಂಬಿಕೆಗಳು, ದೈವ-ದೇವರುಗಳಿಗೆ ನಡೆಸುವ ಪೂಜೆಗಳು, ಮದುವೆ- ಸೀಮಂತ-ನಾಮಕರಣ ಶಾಸ್ತ್ರಗಳು, ಸತ್ತವರಿಗೆ ನಡೆಸುವ ಉತ್ತರ ಕ್ರಿಯೆಗಳು- ಮೊದಲಾದ ವಿಷಯಗಳ ಕುರಿತು ವಿಸ್ತಾರವಾದ ವಿವರಗಳಿವೆ. ಹೀಗೆ ಈ ಕಾದಂಬರಿಯು ಒಂದು ಕಾಲ್ಪನಿಕ ಕಥೆಯೊಂದಿಗೆ ಬಂಟ ಸಮುದಾಯದಲ್ಲಿ ನೆಲೆಯಲ್ಲಿದ್ದ ಗುತ್ತು ಮನೆತನಗಳ ಇತಿಹಾಸದ ಒಂದು ದಾಖಲೀಕೃತ ರೂಪವೆನ್ನಬಹುದು. ಕಾದಂಬರಿ ದೀರ್ಘವಾಗಿರುವುದರಿಂದ ವಿವರಗಳು ಇಡಿಕಿರಿದು ನಿರೂಪಣೆಯ ಮೇಲಿನ ಹಿಡಿತ ಮತ್ತು ತಾಂತ್ರಿಕತೆ ಕೆಲವೆಡೆ ಶಿಥಿಲಗೊಂಡಿದೆಯಾದರೂ ಇತಿಹಾಸದ ಗರ್ಭದೊಳಗೆ ಸೇರಿಹೋಗಿರುವ ಒಂದು ಜೀವನಶೈಲಿಗೆ ಅಕ್ಷರ ರೂಪ ಕೊಟ್ಟು ಶಾಶ್ವತವಾಗಿಸುವ ಲೇಖಕಿಯ ಅದಮ್ಯ ಉತ್ಸಾಹವನ್ನು ಮೆಚ್ಚಲೇಬೇಕು.

ವಿಮರ್ಶಕಿ : ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
