Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಎಡನೀರು ಮಠದಲ್ಲಿ ಡಾ. ರಮಾನಂದ ಬನಾರಿಯವರ ಕವನ ಸಂಕಲನ ಬಿಡುಗಡೆ | ಸೆಪ್ಟೆಂಬರ್ 21

    September 19, 2026

    ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ‘ಸಂಸ್ಕೃತಿ ಸಿರಿ ಸಂಗಮ’ | ಸೆಪ್ಟೆಂಬರ್ 20

    September 19, 2026

    ಧಾರವಾಡ ರಂಗಾಯಣದಲ್ಲಿ ‘ಕವಿ ಕಾವ್ಯ ಸಮ್ಮೇಳನ’ | ಸೆಪ್ಟೆಂಬರ್ 20

    September 19, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ‘ಡುಂಡಿ ಯಾತ್ರೆ’ ಆತ್ಮಕಥೆಯಲ್ಲ.. ಕಾದಂಬರಿ !!
    Article

    ಪುಸ್ತಕ ವಿಮರ್ಶೆ | ‘ಡುಂಡಿ ಯಾತ್ರೆ’ ಆತ್ಮಕಥೆಯಲ್ಲ.. ಕಾದಂಬರಿ !!

    September 19, 2026No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಡುಂಡಿರಾಜರ ಸಾಧನೆ ಒಂದು ಅಸಾಧಾರಣ ಮೈಲಿಗಲ್ಲು. ತಮ್ಮ ಮಾತು ಕೃತಿಗಳಲ್ಲಿ ಹಾಸ್ಯದ ಹೊನಲನ್ನು ಹರಿಸುತ್ತಾ ಬಂದಿರುವ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಕಾವ್ಯ, ಚುಟುಕು, ನಾಟಕ, ಪ್ರಬಂಧ, ವ್ಯಕ್ತಿಚಿತ್ರ, ಶಿಶು ಸಾಹಿತ್ಯ, ಪ್ರವಾಸ ಕಥನಗಳನ್ನು ರಚಿಸಿ ಅವುಗಳಲ್ಲಿ ಜೀವ ಚೈತನ್ಯ ತುಂಬಿ ಕನ್ನಡ ಸಹೃದಯರ ಮನಸೂರೆಗೊಂಡ ಪ್ರತಿಭಾವಂತ ಲೇಖಕ. ಮೃದುಹಾಸ್ಯ, ವ್ಯಂಗ್ಯ, ವಿಡಂಬನೆ, ಸೂಕ್ಷ್ಮ ಚಿಂತನೆ, ಸಮಾಜ ವಿಮರ್ಶೆಯಿಂದ ಕೂಡಿರುವ ಅವರ ಕೃತಿಗಳು ಓದುಗರಿಗೆ ಆಪ್ಯಾಯಮಾನದ ಅನುಭವವನ್ನು ಉಣಬಡಿಸುತ್ತಾ ಬಂದಿವೆ. ಅವರ ಪದಲಾಲಿತ್ಯಕ್ಕೆ ಬೆರಗಾಗದವರಿಲ್ಲ. ಈಗ ಅವರ ಆತ್ಮಕಥೆ, ಅಲ್ಲಲ್ಲ ಆತ್ಮಕಾದಂಬರಿ ಬೆಳಕು ಕಂಡಿದೆ!

    ಆತ್ಮಕಥೆ ಒಂದು ರೀತಿಯಲ್ಲಿ ವ್ಯಕ್ತಿಯೊಬ್ಬ ನಡೆದು ಬಂದ ದಾರಿಯ ಸಿಂಹಾವಲೋಕನ ಹಾಗೂ ಬದುಕಿನಲ್ಲಿ ನಡೆದ ಸಾರ್ಥಕ ಕ್ಷಣಗಳನ್ನು ಮೆಲುಕು ಹಾಕುವ ವಿಶಿಷ್ಟ ಬಗೆಯ ಬರವಣಿಗೆ. ಖ್ಯಾತ ಸಾಹಿತಿ, ಬಹುಮುಖ ಪ್ರತಿಭಾಸಂಪನ್ನ ಲೇಖಕ ಡುಂಡಿರಾಜ್ ಅವರ ಆತ್ಮಚರಿತ್ರೆ ‘ಡುಂಡಿ ಯಾತ್ರೆ’ ಇದೀಗ ಬಿಡುಗಡೆಯಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅವರು ಇದನ್ನು ‘ಆತ್ಮಕಾದಂಬರಿ’ ಎಂದು ನಾಮಕರಣ ಮಾಡಿರುವುದು ವಿಶೇಷ!!

    “ಬಾಲ್ಯಯೌವ್ವನ ಮುದಿತನ
    ಮೂರೇ ಮೂರು ಅಧ್ಯಾಯ
    ಎಲ್ಲರ ಬದುಕು ಒಂದು
    ರೋಚಕ ಕಾದಂಬರಿ
    ಊಹಿಸಲಾಗದು ಮುಕ್ತಾಯ!”

    ನಮ್ಮ ನಾಡಿನ ಹೆಚ್ಚಿನ ಆತ್ಮಚರಿತ್ರೆಗಳಲ್ಲಿ ನೋವು, ಗೋಳು, ಬಡತನ, ಶೋಷಣೆ, ಪಟ್ಟಪಾಡು ಇವುಗಳದೇ ಕಾರುಬಾರು. ಆದರೆ ಡುಂಡಿರಾಜ್ ವಿರಚಿತ ಸಾಂಪ್ರತ ಆತ್ಮಚರಿತ್ರೆ ಸಾಕಷ್ಟು ಭಿನ್ನ ವಿಭಿನ್ನವಾಗಿ ಮೂಡಿ ಬಂದಿರುವುದು ಅವಲೋಕನೀಯವಾಗಿದೆ. ನವಿರಾದ ಹಾಸ್ಯದ ಜೊತೆಗೆ ಅಷ್ಟೇ ಲವಲವಿಕೆಯನ್ನು ಹೊಂದಿರುವ ಈ ಆತ್ಮಕಥನ ಚಿಂತನೀಯವೂ ಹೃದ್ಯವೂ ವಾಚನೀಯವೂ ಆಗಿದೆ. “ಆಟೊಬಯಾಗ್ರಫಿಗೆ ಕನ್ನಡದಲ್ಲಿ ಆತ್ಮಚರಿತ್ರೆ ಅಥವಾ ಆತ್ಮಕಥೆ ಎನ್ನುವುದು ವಾಡಿಕೆ. ನಾನು ವಿಜ್ಞಾನದ ವಿದ್ಯಾರ್ಥಿಯಾದ್ದರಿಂದ ಚರಿತ್ರೆ ಬೇಡ ಅನ್ನಿಸಿತು. ಆತ್ಮ ಕಥನ ದೀರ್ಘವಾಗಿರುವುದರಿಂದ ಅದನ್ನು ಕಥೆ ಅನ್ನುವುದಕ್ಕಿಂತ ಕಾದಂಬರಿ ಅನ್ನುವುದೇ ಸೂಕ್ತವಲ್ಲವೆ? ಹೀಗಾಗಿ ನನ್ನ ಈ ಆತ್ಮ ವೃತ್ತಾಂತವನ್ನು ‘ಆತ್ಮಕಾದಂಬರಿ’ ಎಂದು ಕರೆದಿದ್ದೇನೆ. 75 ಪುಸ್ತಕ ಬರೆದರೂ ಒಂದೂ ಕಾದಂಬರಿ ಬರೆದಿಲ್ಲ ಎಂಬ ಆರೋಪದಿಂದ ಮುಕ್ತನಾಗುವ ಗುಪ್ತ ಕಾರ್ಯಸೂಚಿಯೂ ಇದರಲ್ಲಿದೆ! ಪ್ರತಿಯೊಬ್ಬರ ಜೀವನವೂ ಒಂದು ಯಾತ್ರೆ. ಟೂ(2) ರಿಸ್ಟ್‌ಗಳನ್ನು ಹೊಂದಿರುವ ನಾವೆಲ್ಲರೂ ಟೂರಿಸ್ಟರು! ಪ್ರವಾಸದ ಅವಧಿ, ಅನುಭವ ಬೇರೆ ಬೇರೆಯಾಗಿರುತ್ತದೆ. ಇದು ನನ್ನ ಬದುಕಿನ ಯಾತ್ರೆಯಾದ್ದರಿಂದ ಡುಂಡಿ ಯಾತ್ರೆ. ಮೂವ್ವತ್ತಾರು ವರ್ಷ ಬ್ಯಾಂಕಿನಲ್ಲಿ ಕೆಲಸ ಮಾಡಿದ್ದರೂ ನಾನು ನನ್ನ ವೃತ್ತಿಗಿಂತ ಸಾಹಿತ್ಯವನ್ನೇ ಹೆಚ್ಚು ಪ್ರೀತಿಸಿದವ. ಆದ್ದರಿಂದ ಡುಂಡಿಯಾತ್ರೆಯಲ್ಲಿ ವಿತ್ತ ಲೋಕಕ್ಕಿಂತ ಅಕ್ಷರ ಲೋಕದ ಸಂಗತಿಗಳಿಗೆ ಹೆಚ್ಚು ಒತ್ತು ನೀಡಿರುವೆ. ಇದು ಉದ್ದೇಶಪೂರ್ವಕವಾಗಿ ಮಾಡಿದ ಪಕ್ಷಪಾತ” ಎಂಬುದು ಲೇಖಕರ ಅಂಬೋಣ.

    ಕನ್ನಡ ಹಾಸ್ಯ ಸಾಹಿತ್ಯದಲ್ಲಿ ಡುಂಡಿರಾಜ್ ಅವರಿಗೆ ಬಹುಮುಖ್ಯವಾದ ಸ್ಥಾನವಿದೆ. ಹಾಸ್ಯದ ನೈಜ ಅಭಿವ್ಯಕ್ತಿಯನ್ನು ಅವರ ಬರವಣಿಗೆಯಲ್ಲಿ ನಾವು ಧಾರಾಳವಾಗಿ ಕಾಣಬಹುದಾಗಿದೆ. ಹನಿಗವನ, ನವಚಂಪೂ ಬರವಣಿಗೆಯ ಮೂಲಕ ಅವರು ಕನ್ನಡ ನಗೆ ಸಾಹಿತ್ಯಕ್ಕೆ ಹೊಸ ದಿಕ್ಕುದೆಸೆಯನ್ನು ತೋರಿಸಿಕೊಟ್ಟವರು. ಡುಂಡಿರಾಜರ ಹೆಸರು ಕೇಳಿದ ತಕ್ಷಣ ಕನ್ನಡ ಕಾವ್ಯಪ್ರಿಯರ ಮನಸ್ಸು ಅರಳುತ್ತದೆ, ಮುಖದಲ್ಲಿ ಮಂದಹಾಸ ಮೂಡುತ್ತದೆ. ಈ ಸಣ್ಣ ಪದ್ಯಗಳ ದೊಡ್ಡ ಸರದಾರನಿಗೆ ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನಮಾನವಿದೆ.

    ಗದ್ಯ ಪದ್ಯಗಳೆರಡನ್ನೂ ಡುಂಡಿರಾಜ್ ಅವರು ತಮ್ಮ ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಅವರು ಚುಟುಕು ಸಾಮ್ರಾಟ, ನಾಟಕಕಾರ, ಅಂಕಣಕಾರ, ಒಳ್ಳೆಯ ಕವಿ, ಸಾಹಿತಿ. ಹಾಸ್ಯದ ನಾನಾ ಮುಖಗಳನ್ನು ತಮ್ಮ ಬರವಣಿಗೆಯಲ್ಲಿ ಸಮೃದ್ಧವಾಗಿ ದಾಖಲಿಸಿ ನಮ್ಮ ಮುಂದಿಟ್ಟಿದ್ದಾರೆ. ಜನಸಾಮಾನ್ಯರ ಜೀವನವನ್ನು ಸ್ವಾಭಾವಿಕವಾಗಿ ಅಷ್ಟೇ ಕಲಾತ್ಮಕವಾಗಿ ಚಿತ್ರಿಸುವುದರಲ್ಲಿ ಅವರು ಸಿದ್ಧಹಸ್ತರು. ಈಗ ಅವರಿಗೆ 70ರ ಸಂಭ್ರಮ. ಸಂಜೆಗಣ್ಣಿನ ಹಿನ್ನೋಟದಲ್ಲಿ ಪ್ರಕಟವಾಗಿರುವ ಈ ಕೃತಿಯಲ್ಲಿ ಆತ್ಮರತಿ ಹಾಗೂ ಆತ್ಮವಂಚನೆಗಳಿಗಿಂತ ಆತ್ಮಾವಲೋಕನಕ್ಕೆ ಆದ್ಯತೆ ನೀಡಿರುವುದು ಒಡೆದು ಕಾಣುವ ಅಂಶ. ಜಗದಗಲದ ಸಾಮಯಿಕ ಸಾಂಸ್ಕೃತಿಕ ವಿದ್ಯಮಾನಗಳ ಮುಕ್ತ ಚಿಂತನೆ ಇಲ್ಲಿ ನೆಲೆಪಡೆದಿರುವುದು, ಅದರ ನಿರೂಪಣಾ ವಿಧಾನ ಈ ಕಥನದ ಇನ್ನೊಂದು ವಿಶೇಷ.

    ಇಲ್ಲಿನ ಡುಂಡಿ ಯಾತ್ರೆಗೆ ನವ ನಿಲ್ದಾಣಗಳಿವೆ. ಹುಟ್ಟೂರಿನಲ್ಲಿ ಹದಿನಾರು ವರ್ಷ, ಕಾಲೇಜು ಓದು ಕಾಲು, ಮೋಜು ಮುಕ್ಕಾಲು, ವೃತ್ತಿ ಜೀವನದ ವೃತ್ತಾಂತ, ಒಲವಿನ ಒಲಂಪಿಕ್ಸ್, ಮಾಧ್ಯಮಗಳ ಬಾಂಧವ್ಯ, ಸಮಾರಂಭಗಳ ಸಿಹಿ ಕಹಿ ನೆನಪು, ವಿದೇಶಗಳಲ್ಲಿ ಕನ್ನಡ ಡುಂಡಿಮ, ಸಾಹಿತಿ ಕಲಾವಿದರು ಉಸ್ತುವಾರಿ ಮಿತ್ರರು, ಹನಿಕೇತನದಲ್ಲಿ ಹತ್ತು ವರ್ಷ ಹೀಗೆ ಒಂಬತ್ತು ಅಧ್ಯಾಯ ಹಾಗೂ ಅನೇಕ ಉಪ ಅಧ್ಯಾಯಗಳಲ್ಲಿ ಅತ್ಯಂತ ರೋಚಕವಾಗಿ ಸ್ವಾರಸ್ಯಪೂರ್ಣವಾಗಿ ತಮ್ಮ ಜೀವನ ಯಾನವನ್ನು ಅವರಿಲ್ಲಿ ಅನಾವರಣಗೊಳಿಸಿದ್ದಾರೆ. ಅಲ್ಲಲ್ಲಿ ತಮ್ಮದೇ ಆದ ಹರಿತವಾದ ಹಾಸ್ಯಭರಿತ ಹನಿಗವಿತೆಗಳನ್ನು ಹಾಕಿ ಈ ಬರವಣಿಗೆ ಚೆಲುವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಚಿತ್ರಸಂಪುಟ, ಕವಿಯ ಸಮಗ್ರ ಜೀವನ ವಿವರ, ಸರ್ವಾಂಗ ಸುಂದರವಾದ ಮುದ್ರಣ ವಿನ್ಯಾಸದಿಂದ ಈ ಕೃತಿ ಮುದ್ದಾಗಿ ಮೂಡಿ ಬಂದಿದೆ.

    ಆತ್ಮಕಥೆ ಅಥವಾ ಆತ್ಮಚರಿತ್ರೆ ಅಖಿಲ ಭಾರತ ಮಟ್ಟದಲ್ಲಿ ಬಹು ಭಾಷೆಗಳಲ್ಲಿ ಕಳೆದ 150 ವರ್ಷಗಳಲ್ಲಿ ಒಂದು ಪ್ರಮುಖ ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದಿದೆ. ಕನ್ನಡದಲ್ಲಿ ಆತ್ಮಕಥೆಗಳ ಬೆಳೆ ಸಾಕಷ್ಟು ಸಮೃದ್ಧವಾಗಿದೆ. ಕುವೆಂಪು, ಮಾಸ್ತಿ, ಶಿವರಾಮ ಕಾರಂತ, ಅನಕೃ, ಮಲ್ಲಿಕಾರ್ಜುನ ಮನ್ಸೂರ, ಭೈರಪ್ಪ, ರಾಜ್ ಕುಮಾರ್ ಮೊದಲಾದ ದಿಗ್ಗಜ ಕನ್ನಡ ಸಾಧಕರು ಆತ್ಮಚರಿತ್ರೆಯನ್ನು ಬರೆದು ಸೈಯೆನಿಸಿಕೊಂಡಿದ್ದಾರೆ. ಜೊತೆಗೆ ಕಲಾವಿದರು, ರಾಜಕಾರಣಿಗಳು, ಉದ್ಯಮಿಗಳು, ಹೋರಾಟಗಾರರು, ವಿಭಿನ್ನ ಕ್ಷೇತ್ರಗಳಲ್ಲಿ ವಿಶೇಷವಾದ ಸಾಧನೆ ಮಾಡಿದವರು ಸಹ ತಮ್ಮ ತಮ್ಮ ಆತ್ಮಚರಿತ್ರೆಗಳನ್ನು ಬರೆದು ಪ್ರಕಟಿಸಿದ್ದಾರೆ. ಮರಾಠಿ ದಲಿತ ಆತ್ಮಕಥೆಗಳಂತೂ ಲೋಕಪ್ರಿಯವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆಚಾರ್ಯ ಪ್ರಹ್ಲಾದ್ ಕೇಶವ ಅತ್ರೆ ಅವರು ಮರಾಠಿಯ ಧೀಮಂತ ಸಾಹಿತಿಗಳಲ್ಲಿ ಒಬ್ಬರು. ಅವರು ಬರೆದ ಕರ್ಹೆಚೇ ಪಾನಿ ಆತ್ಮಕಥನ ಬಹು ಸಂಪುಟಗಳು ಅನೇಕ ಸಲ ಮುದ್ರಣಗಳನ್ನು ಕಂಡು ಸಾಕಷ್ಟು ಜನಪ್ರಿಯವಾಗಿದೆ.

    ಆತ್ಮಕಥನ ರಚನೆಯ ಉದ್ದೇಶ, ಅದರ ಅಗತ್ಯ ಮತ್ತು ಮಹತ್ವವನ್ನು ಅತ್ರೆಯವರು ಹೀಗೆ ತೆರೆದಿಟ್ಟಿದ್ದಾರೆ “ಇಷ್ಟೊಂದು ಚಿಕ್ಕ ಮನುಷ್ಯ ಇಷ್ಟು ಬೃಹತ್ತಾದ ಆತ್ಮಕಥನವನ್ನು ಏಕೆ ಬರೆದ ಎಂದು ಕೇಳಿದರೆ, ಇದರಲ್ಲಿ ನಾನು ಎಂಬುದಕ್ಕೆ ಅತ್ಯಂತ ಕಡಿಮೆ ಮಹತ್ವವಿದೆ. ನನ್ನ ದೃಷ್ಟಿಯಲ್ಲಿ ಆತ್ಮಕಥನವೆಂದರೆ, ಕಳೆದ ಐದು ದಶಕಗಳಲ್ಲಿ ಮಹಾರಾಷ್ಟ್ರದಲ್ಲಿ ಘಟಿಸಿದಂಥ ಐತಿಹಾಸಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಕ ವಿದ್ಯಮಾನಗಳನ್ನು ಸಮಗ್ರ ವಿವರಗಳೊಂದಿಗೆ ವಿವರಿಸುವದೇ ಆಗಿದೆ. ಇಲ್ಲಿ ನನ್ನ ಪಾತ್ರ ಬಹುಮಟ್ಟಿಗೆ ಪ್ರೇಕ್ಷಕ ಹಾಗೂ ನಿರೂಪಕನದಷ್ಟೇ ಆಗಿದೆ” ಪ್ರಸ್ತುತ ಡುಂಡಿ ಯಾತ್ರೆಗೂ ಈ ಮಾತು ಚೆನ್ನಾಗಿ ಅನ್ವಯಿಸುತ್ತದೆ. ಲೇಖಕರ ಪ್ರಾಪಂಚಿಕ ಜೀವನ, ಬಹೂದಕ ಪ್ರವೃತ್ತಿ, ಲೋಕ ಸಂಚಾರ ಗುಣ, ಚಿಕಿತ್ಸಕ ದೃಷ್ಟಿಕೋನ, ಎಲ್ಲವನ್ನು ವಸ್ತುನಿಷ್ಠವಾಗಿ ಪರಿಭಾವಿಸುವ ಮನಸ್ಸಿನ ಪರಿಪಕ್ವತೆ, ಸಾಮಾಜಿಕ ಕಳಕಳಿ, ಸೌಂದರ್ಯ ಪ್ರಜ್ಞೆ, ಸತ್ಯಾಸತ್ಯಗಳ ಶೋಧ ಗುಣ ಇಲ್ಲಿ ಎದ್ದು ಕಾಣುವ ಅಂಶ. ಕನ್ನಡ ಆತ್ಮಕಥನ ಲೋಕಕ್ಕೆ ಇದೊಂದು ಶ್ರೀಮಂತ ಕೊಡುಗೆ ಎಂದರೆ ಅತ್ಯುಕ್ತಿಯಾಗದು. ಈ ಆತ್ಮಕಥೆಯ ಕೆಲವು ಸ್ವಾರಸ್ಯಕರ ಭಾಗಗಳನ್ನು ಓದಿಯೇ ಸವಿಯಬೇಕು.

    ಹಿಡಿದು ಬಂದ ಹಾದಿ!
    ಎಪ್ಪತ್ತರಲ್ಲೊಂದು ಹನಿ ನೋಟ
    “ಬಳಸದೆ ಎಲ್ಲವನ್ನೂ ಉಳಿಸಲು ಯತ್ನಿಸುತ್ತಾನೆ ಮನುಷ್ಯ ಬಳಸದಿದ್ದರೂ ಖರ್ಚಾಗುತ್ತದೆ ಆಯುಷ್ಯ”

    ಕವಿ ಅಡಿಗರು “ನಡೆದುಬಂದ ದಾರಿಕಡೆಗೆ/ ತಿರುಗಿಸಬೇಡ/ ಕಣ್ಣ/ ಹೊರಳಿಸಬೇಡ” ಅಂದಿದ್ದಾರೆ. ಆದರೂ, ಎಪ್ಪತ್ತು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಹಿಡಿದು ಬಂದ ಹಾದಿಯತ್ತ ಒಂದು ಹಿನ್ನೋಟ ಅಥವಾ ಹನಿ ನೋಟ ಬೀರುವುದು ತಪ್ಪಲ್ಲ ಅನ್ನಿಸುತ್ತಿದೆ. ನನ್ನ ತಂದೆ ತಾಯಿಗೆ ನಾನು ಕೊನೆಯ ಮಗನಾಗಿ ಹುಟ್ಟಿದ್ದು ನನ್ನ ಅದೃಷ್ಟ. ಇದರಿಂದಾಗಿ ಬಾಲ್ಯದಲ್ಲಿ ಅಪ್ಪ ಅಮ್ಮನ ಜೊತೆಗೆ ಒಬ್ಬ ಅಣ್ಣ ಮತ್ತು ನಾಲ್ವರು ಅಕ್ಕಂದಿರ ಪ್ರೀತಿ, ಕೊಂಗಾಟ ನನಗೆ ಲಭಿಸಿತ್ತು. ನನ್ನ ಹುಟ್ಟು, ಶಿಕ್ಷಣ, ಉದ್ಯೋಗ, ಮದುವೆ ಇತ್ಯಾದಿ ಲೌಕಿಕ ಸಂಗತಿಗಳೆಲ್ಲವೂ ಆಕಸ್ಮಿಕ ಅಥವಾ by chance. ಆದರೆ ನಾನು ಕವಿಯಾದದ್ದು ಮಾತ್ರ by choice. ಕವನ ರಚನೆಯನ್ನು ಒಂದು ಆಟದಂತೆ ಆರಂಭಿಸಿದ ನನಗೆ ಮುಂದೊಂದು ದಿನ ನಾನು ಬರೆದ ಪದ್ಯಗಳು ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳ್ಳಬಹುದು ಎಂಬ ಕಲ್ಪನೆ ಇರಲಿಲ್ಲ.

    ಹೆಸರಿನ ಕೊಸರು-ದುಂಡಿಯೊ? ಡುಂಡಿಯೊ? : ಎಚ್. ಡುಂಡಿರಾಜ್ ಎಂಬ ಹೆಸರಿನಲ್ಲಿ ನನ್ನ 7000ಕ್ಕೂ ಹೆಚ್ಚು ಹನಿಗವನಗಳು, 75 ಪುಸ್ತಕಗಳು ಪ್ರಕಟವಾಗಿದ್ದರೂ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ, ಪತ್ರಿಕಾ ವರದಿಗಳಲ್ಲಿ, ನನ್ನ ಬಗ್ಗೆ ಬರೆದ ಲೇಖನಗಳಲ್ಲಿ, ನನ್ನ ಹೆಸರು ಈಗಲೂ ಬಹಳಷ್ಟು ಸಲ ದುಂಡಿರಾಜ್ ಅಂತ ತಪ್ಪಾಗಿ ಅಚ್ಚಾಗುತ್ತದೆ. ಅನೇಕರು ವೇದಿಕೆಯಲ್ಲೂ ಹಾಗೆಯೇ ಹೇಳುತ್ತಾರೆ. ಆಂಗ್ಲ ಭಾಷೆಯಲ್ಲಿ ನನ್ನ ಹೆಸರಿನ ಸ್ಪೆಲ್ಲಿಂಗ್ Dundiraj, Du ಅನ್ನುವುದನ್ನು ದು ಅಥವಾ ಡು ಎಂದು ಎರಡು ರೀತಿಯಲ್ಲಿ ಉಚ್ಚರಿಸಬಹುದು. ಅದೇ ಈ ಅವಾಂತರಕ್ಕೆ ಕಾರಣ. ಹಲವು ದಶಕಗಳ ಹಿಂದೆ ನನ್ನ ಹೆಸರು ಡುಂಡಿಯೊ? ದುಂಡಿಯೊ? ಎಂಬ ವಿಷಯದಲ್ಲಿ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಮತ್ತು ಕತೆಗಾರ ಎಂ.ಎಸ್. ಶ್ರೀರಾಮ್ ಹತ್ತು ರೂಪಾಯಿ ಬೆಟ್ ಕಟ್ಟಿದ್ದರು. ಆ ಜೂಜಾಟದಲ್ಲಿ ದುಂಡಿ ಎಂದು ವಾದಿಸಿದ್ದ ಭುವನೇಶ್ವರಿ ಹಣ ಕಳೆದುಕೊಂಡಿದ್ದರು. ನಂತರ ಆ ವಿಷಯದ ಬಗ್ಗೆ ಹಾಸ್ಯ ಪ್ರಬಂಧ ಬರೆದು ತುಷಾರ ಮಾಸಿಕದಲ್ಲಿ ಪ್ರಕಟಿಸಿ ನಷ್ಟ ಭರ್ತಿ ಮಾಡಿಕೊಂಡಿದ್ದರು. ನನಗೆ ಸನ್ಮಾನ ಮಾಡಿ ನೀಡಿದ ಕೆಲವು ಪ್ರಶಸ್ತಿ ಫಲಕಗಳಲ್ಲೂ ನನ್ನ ಹೆಸರು ದುಂಡಿಯಾಗಿದೆ. ಸರಿಪಡಿಸಿಕೊಡುತ್ತೇನೆ ಎಂದು ಫಲಕವನ್ನು ವಾಪಾಸು ಪಡೆದ ಸಂಘಟಕರೊಬ್ಬರು ಇನ್ನೂ ಅದನ್ನು ಮರಳಿಸಿಲ್ಲ. ಅದು ಬೆಳ್ಳಿಯ ಫಲಕವಾಗಿರುವುದರಿಂದ ವಾಪಾಸು ಬರುವ ಸಾಧ್ಯತೆ ಇಲ್ಲ ಅನ್ನಿಸುತ್ತದೆ.

    ಚಿತ್ರರಂಗದ ಗಣ್ಯರೊಬ್ಬರು ಬಹುಶಃ ಡಿಂಗ್ರಿ ನಾಗರಾಜ್ ಎಂಬ ಹಾಸ್ಯ ನಟನ ಹೆಸರಿನ ಪ್ರಭಾವದಿಂದ ವೇದಿಕೆಯಲ್ಲಿ ನನ್ನನ್ನು ಡುಂಡಿ ನಾಗರಾಜ್ ಎಂದು ಸಂಬೋಧಿಸಿದ್ದರು. ಅಷ್ಟೇ ಅಲ್ಲ, ನಮ್ಮ ಯುವ ಜನಾಂಗ ಡುಂಡಿ ನಾಗರಾಜರ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದಬೇಕೆಂದು ಕರೆ ನೀಡಿದ್ದರು. ಎಚ್.ಎಂ.ಟಿ. ಸಂಸ್ಥೆ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಮತ್ತು ನಾನು ಅತಿಥಿಗಳಾಗಿದ್ದೆವು. ರಾಘಣ್ಣ ತಮ್ಮ ಭಾಷಣದಲ್ಲಿ “ವೇದಿಕೆಯ ಮೇಲೆ ಕವಿಗಳಿದ್ದಾರೆ. ಕವಿಗಳು ಸರಸ್ವತಿ ಪುತ್ರರು. ಅವರ ಹೆಸರು ಹೇಳಬಾರದು ಅಂತ ಅಪ್ಪಾಜಿ ಹೇಳ್ತಾ ಇದ್ದರು” ಎಂದು ನನ್ನ ಹೆಸರನ್ನು ಸರಿಯಾಗಿ ಉಚ್ಚರಿಸುವ ಕಷ್ಟದಿಂದ ಪಾರಾಗಿದ್ದರು. ಇತ್ತೀಚೆಗೆ ಒಂದು ಕಡೆ ನನ್ನ ಹೆಸರನ್ನು ‘ದುಂಬಿರಾಜ್’ ಎಂದು ಬರೆದದ್ದನ್ನು ನೋಡಿ ನನಗೆ ಬಹಳ ಸಂತೋಷವಾಯಿತು.

    ಹೊಟ್ಟೆಪಾಡಿಗಾಗಿ ಆರಿಸಿಕೊಂಡ ಬ್ಯಾಂಕ್ ಉದ್ಯೋಗದಲ್ಲೂ ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದೆ ಅಂತಲೇ ನನಗೆ ಅನ್ನಿಸುತ್ತದೆ. ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ Intelligence is flexibility of adjustment ಎಂದು ಓದಿದ್ದು ಆಗಾಗ ನನಗೆ ನೆನಪಾಗುತ್ತದೆ. ಅದರಿಂದಾಗಿ ಸನ್ನಿವೇಶಕ್ಕೆ ಹೊಂದಿಕೊಳ್ಳುವ, ಸಮಚಿತ್ತದಿಂದ ಬದುಕುವ ಪ್ರಯತ್ನವನ್ನು ನಾನು ಮಾಡುತ್ತೇನೆ. ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದಿರುವುದು ನನ್ನ ಸ್ವಭಾವ. ಕಾಲೇಜು ದಿನಗಳಲ್ಲಿ ದೇವರುಗಳಿಂದ ದೂರವಿರುತ್ತಿದ್ದ ನಾನು ಸಂಸಾರಸ್ಥನಾದ ನಂತರ ಎಲ್ಲರಂತೆ ದೇವರನ್ನು ನಂಬಿ ಅವನ ಮೇಲೆ ಭಾರ ಹಾಕ ತೊಡಗಿದೆ. ದಿನಕ್ಕೆ ಎರಡು ಬಾರಿ ಊದುವ ಶಂಖ ಊದಿ ದೇವರಿಗೆ ಕೈ ಮುಗಿದು ಪ್ರಾರ್ಥನೆ ಸಲ್ಲಿಸುತ್ತೇನೆ.

    ನನ್ನ ಗೆಳೆಯರೊಬ್ಬರು ಒಮ್ಮೆ “ನಾನು ಯಾವ ದೇವರನ್ನೂ ಪೂಜಿಸುವುದಿಲ್ಲ. ಪ್ರಾರ್ಥನೆ ಮಾಡುವುದಿಲ್ಲ. ಆದರೂ ಸುಖವಾಗಿದ್ದೇನೆ. ಆದ್ದರಿಂದ ಅವೆಲ್ಲ ಬೇಕಿಲ್ಲ.” ಅಂದಿದ್ದರು. ಆಗ ನಾನು ಅವರಿಗೆ ಹೀಗೆ ಹೇಳಿದ್ದೆ: “ನೀವು ಪೂಜೆ, ಪ್ರಾರ್ಥನೆ ಮಾಡದಿದ್ದರೇನು? ನಿಮ್ಮ ಪರವಾಗಿ ನಿಮ್ಮ ಮಡದಿ, ಮಕ್ಕಳು ದೇವರನ್ನು ಪೂಜಿಸಿ ನಿಮ್ಮ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಅದು ನಿಮ್ಮನ್ನು ಕಾಪಾಡುತ್ತದೆ.” ಬದುಕಿನ ಅರ್ಥ, ಉದ್ದೇಶ ಏನು? ಸಾವಿನ ನಂತರ ಏನು? ಎಂಬುದರ ಬಗ್ಗೆ ಚಿಂತಕರು, ತತ್ವಶಾಸ್ತ್ರಜ್ಞರು ನೀಡುವ ಉತ್ತರಗಳು ನನಗೆ ಎಂದೂ ಸಂಪೂರ್ಣ ಸಮಾಧಾನ ನೀಡಿಲ್ಲ. ಅವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ನನಗೆ ಇನ್ನೂ ಬಿಡುವಾಗಿಲ್ಲ. ನಾನೊಮ್ಮೆ ಒಂದು ಬಸ್ಸಿನಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದೆ. ಬಸ್ಸಿನಲ್ಲಿ ವಿಪರೀತ ರಶ್ ಇತ್ತು. ಟಿಕೆಟ್ ಕೊಡಲು ಬಂದ ನಿರ್ವಾಹಕರು “ಎಲ್ಲಿಗೆ?” ಎಂದು ಕೇಳಿದರು. ನನಗೆ ಎಷ್ಟು ಯೋಚಿಸಿದರೂ ನಾನು ಇಳಿಯಬೇಕಾದ ನಿಲ್ದಾಣದ ಹೆಸರು ನೆನಪಾಗಲಿಲ್ಲ. ನಿರ್ವಾಹಕರು “ಬೇಗ ಹೇಳಿ. ಎಲ್ಲಿಗೆ? ಎಲ್ಲಿಗೆ?” ಎಂದು ಜೋರಾಗಿ ಕೂಗತೊಡಗಿದರು. ಜನರೆಲ್ಲ ನನ್ನನ್ನು ವಿಚಿತ್ರ ಎಂಬಂತೆ ನೋಡುತ್ತಿದ್ದರು. ನಾನು ಹೇಳಲಾಗದೆ ಒದ್ದಾಡುತ್ತಿದ್ದೆ. ಎಷ್ಟು ಹೊತ್ತು ಆ ಸ್ಥಿತಿಯಲ್ಲಿದ್ದೆನೋ ಗೊತ್ತಿಲ್ಲ. ಎಚ್ಚರವಾದಾಗ ‘ಅಬ್ಬ ಬಚಾವಾದೆ’ ಅನಿಸಿತ್ತು. ಬಹಳ ವರ್ಷಗಳ ಹಿಂದೆ ನನಗೆ ಬಿದ್ದಿದ್ದ ಆ ಕನಸು ಈಗ ನೆನಪಾಗಿ ‘ಡುಂಡಿ ಯಾತ್ರೆ’ಯನ್ನು ಹೇಗೆ ಮುಗಿಸುವುದು? ಎಂಬ ನನ್ನ ಸಮಸ್ಯೆ ಪರಿಹಾರವಾಯಿತು. ಇಲ್ಲಿ ದಿನಚರಿ ಇದೆ, ಪ್ರಬಂಧವಿದೆ, ಕತೆ ಇದೆ, ಕಾದಂಬರಿಯಂತೆ ವಿಭಿನ್ನ ಶೈಲಿಯೂ ಇದೆ. ವಾಸ್ತವದ ಬದುಕಿನ ಪ್ರಾಮಾಣಿಕ ಅಭಿವ್ಯಕ್ತಿಯೂ ಇದೆ.

    “ಜೀವನದಲ್ಲಿ ನಡೆದ ಎಲ್ಲ ಸಂಗತಿಗಳನ್ನೂ ಆತ್ಮಕಥೆಯಲ್ಲಿ ಹೇಳುವ ಅಗತ್ಯವಿದೆಯೆ? ಸತ್ಕಾರ್ಯಗಳ ಜೊತೆಗೆ ದುಷ್ಕೃತ್ಯಗಳನ್ನೂ ದಾಖಲಿಸಬೇಕೆ? ತಪ್ಪುಗಳನ್ನು ಎಲ್ಲರೂ ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ಕೆಲವೊಂದು ದುರ್ಬಲ ಕ್ಷಣಗಳಲ್ಲಿ ತಪ್ಪುಗಳು ಆಗುತ್ತವೆ. ಆ ಬಗ್ಗೆ ನಂತರ ನಾವೇ ಪಶ್ಚಾತ್ತಾಪ ಪಡುತ್ತೇವೆ. ಅವುಗಳನ್ನು ಬರೆದು ನಾನು ಸತ್ಯಸಂಧ ಎಂದು ತೋರಿಸಿಕೊಳ್ಳಬಹುದು. ಆದರೆ ಓದಿದವರಿಗೆ ಅವುಗಳಿಂದ ಏನೂ ಪ್ರಯೋಜನವಾಗುವುದಿಲ್ಲ. ನಮ್ಮ ಬದುಕಿನ ಯಾತ್ರೆಯ ಹಾದಿಯನ್ನು ಗಮನಿಸುವ ಕಿರಿಯರಿಗೆ ನಾವೂ ಅದೇ ಮಾರ್ಗದಲ್ಲಿ ಸಾಗಬಹುದು ಅನ್ನಿಸಿದರೆ ಆತ್ಮಕಥೆ ಬರೆದದ್ದು ಸಾರ್ಥಕ ಎಂದು ನನ್ನ ಭಾವನೆ. ಆತ್ಮಕಥನದಲ್ಲಿ ಬಡತನ, ಅದರಿಂದಾಗಿ ಅನುಭವಿಸಿದ ಕಷ್ಟ, ನೋವು, ಅವಮಾನಗಳೇ ಮುನ್ನೆಲೆಗೆ ಬರುವುದು ಸಾಮಾನ್ಯ. ಬಡತನ ಇಲ್ಲದವರಿಗೂ ನೋವು ಇರಬಾರದೆಂದಿಲ್ಲ. ಆದರೆ ಆತ್ಮಕಥೆ ಬರೀ ಗೋಳಿನ ಗೀತೆಯಾಗಬೇಕೆ? ನಮ್ಮೆಲ್ಲರ ಪ್ರೀತಿಯ ಕವಿ ಕೆ.ಎಸ್.ನ “ನೊಂದ ನೋವನ್ನಷ್ಟೆ ಹಾಡಬೇಕೇನು? ಬೇಡವೆ ಯಾರಿಗೂ ಸಿರಿಮಲ್ಲಿಗೆ?” ಎಂದು ಕೇಳಿದ್ದಾರೆ. ನನ್ನ ಬಾಳಿನ ಯಾತ್ರೆಯ ಕಥನದಲ್ಲಿ ಗೋಳಿಗಿಂತ ಡುಂಡಿ ಮಲ್ಲಿಗೆಯ ಸೌರಭವೆ ಹೆಚ್ಚಾಗಿರುವಂತೆ ಎಚ್ಚರವಹಿಸಿದ್ದೇನೆ” ಹೀಗಾಗಿ ಈ ಕೃತಿ ಕಾದಂಬರಿಯೋಪಾದಿಯಲ್ಲಿ ಅಷ್ಟೇ ಆಕರ್ಷಕವಾಗಿ ಮೂಡಿಬಂದಿದೆ. ಇದು ವರ್ತಮಾನದ ಬದುಕಿಗೆ ಇಂಬು ನೀಡುವ ಪ್ರೇರಣಾತ್ಮಕವೂ ಪ್ರಭಾವಶಾಲಿಯೂ ಆದ ಆತ್ಮಕಥನ. ಡುಂಡಿರಾಜ್ ಅವರ ಶ್ರಾವಣ ಪ್ರತಿಭೆ ಇಲ್ಲಿ ಮಿರಿ ಮಿರಿ ಮಿಂಚಿದೆ. ಮರಾಠಿಯ ಪ್ರಸಿದ್ಧ ವಿಡಂಬನಕಾರ, ಹಾಸ್ಯ ಸಾಹಿತ್ಯ ಪಿತಾಮಹ ಎಸ್.ಕೆ. ಕೊಲ್ಹಾಟ್ಕರ್ ಅವರ ಆತ್ಮ ವೃತ್ತ ಹಾಗೂ ಕನ್ನಡದ ಹಿರಿಯ ಹಾಸ್ಯ ಸಾಹಿತಿ ಬೀಚಿ ಅವರ ಆತ್ಮಚರಿತ್ರೆ ಭಯಾಗ್ರಾಫಿಗಿಂತ ಡುಂಡಿರಾಜ್ ಅವರ ಈ ಕೃತಿ ಸಾಕಷ್ಟು ಭಿನ್ನವಾಗಿದೆ. ಇದನ್ನು ಪ್ರಕಟಿಸಿದ, ದೊಡ್ಡ ಓದುಗ ವರ್ಗವನ್ನು ಸೃಷ್ಟಿಸಿದ ಅಂಕಿತ ಪುಸ್ತಕದ ಮಿತ್ರರಿಗೂ ಅಭಿನಂದನೆಗಳು.

    (ಆತ್ಮಕಥೆ) ಎಚ್. ಡುಂಡಿರಾಜ್
    ಅಂಕಿತ ಪುಸ್ತಕ, ಬೆಂಗಳೂರು, ಬೆಲೆ ರೂ.495/-

    ವಿಮರ್ಶಕರು : ಪ್ರೊ. ಜಿ.ಎನ್. ಉಪಾಧ್ಯ, ಮುಂಬೈ

    ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಕಾರ್ಕಳದಲ್ಲಿ ವಿದುಷಿ ವರ್ಷಾ ಕಾಕಾತ್ಕರ್ ಇವರ ಭರತನಾಟ್ಯ ರಂಗಪ್ರವೇಶ | ಸೆಪ್ಟೆಂಬರ್ 20
    Next Article ಹೆಚ್.ಕೆ.ಎಸ್. ಕಾಲೇಜಿನಲ್ಲಿ ‘ಕಾವ್ಯ ಪರ್ವ’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಶ್ರೀ ಎಡನೀರು ಮಠದಲ್ಲಿ ಡಾ. ರಮಾನಂದ ಬನಾರಿಯವರ ಕವನ ಸಂಕಲನ ಬಿಡುಗಡೆ | ಸೆಪ್ಟೆಂಬರ್ 21

    September 19, 2026

    ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ‘ಸಂಸ್ಕೃತಿ ಸಿರಿ ಸಂಗಮ’ | ಸೆಪ್ಟೆಂಬರ್ 20

    September 19, 2026

    ಧಾರವಾಡ ರಂಗಾಯಣದಲ್ಲಿ ‘ಕವಿ ಕಾವ್ಯ ಸಮ್ಮೇಳನ’ | ಸೆಪ್ಟೆಂಬರ್ 20

    September 19, 2026

    ಕನ್ನಡ ಭವನದಲ್ಲಿ ‘ಮುಧೋಳ ಕವಿ-ಕಾವ್ಯ ಸಮ್ಮೇಳನ ಹಾಗೂ ರತ್ನ ಸನ್ಮಾನ 2026’ | ಸೆಪ್ಟೆಂಬರ್ 20

    September 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.