Subscribe to Updates

    Get the latest creative news from FooBar about art, design and business.

    What's Hot

    ಹಳೆಯಂಗಡಿಯಲ್ಲಿ ಯುಗಾದಿ ಪ್ರಯುಕ್ತ ‘ಭಾವ ಗಾನ ಯಾನ’ ಕಾರ್ಯಕ್ರಮ

    April 21, 2026

    ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಪ್ರವೇಶಾತಿ ಪ್ರಾರಂಭ

    April 21, 2026

    ಸದಾಶಿವ ಅನಂತಪುರ ಇವರ ‘ಪಂಚಮ ಸ್ಮೃತಿ’ ಸಮಾರಂಭ

    April 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನೃತ್ಯ ವಿಮರ್ಶೆ | ‘ಸಮನ್ವಯ ಕಲೋತ್ಸವ’ದ ವೈವಿಧ್ಯಪೂರ್ಣ ರಂಜನೆ
    Bharathanatya

    ನೃತ್ಯ ವಿಮರ್ಶೆ | ‘ಸಮನ್ವಯ ಕಲೋತ್ಸವ’ದ ವೈವಿಧ್ಯಪೂರ್ಣ ರಂಜನೆ

    April 21, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅದೊಂದು ರಸ ಸಂಜೆ. ಮಲ್ಲೇಶ್ವರದ ‘ಸೇವಾಸದನ’ದಲ್ಲಿ ಡಾ. ವೀಣಾಮೂರ್ತಿ ವಿಜಯ್ ಆಯೋಜಿಸಿದ ಶ್ರೀ ರಾಜರಾಜೇಶ್ವರಿ ಕಲಾನಿಕೇತನ ಅರ್ಪಿಸಿದ ವೈವಿಧ್ಯಪೂರ್ಣ ಕಾರ್ಯಕ್ರಮಗಳು ನೆರೆದ ಕಲಾರಸಿಕರ ಹೃದಯಸ್ಪರ್ಶಿಸಿ ಮನರಂಜಿಸಿದವು. ಮೊದಲಿಗೆ ಪ್ರಸ್ತುತವಾದ ಶಾಸ್ತ್ರೀಯ ನೃತ್ಯಗಳು ಮಂಗಳಕರ ಶುಭಾರಂಭವನ್ನು ಮಾಡಿದರೆ, ನಂತರದ ಪ್ರಸ್ತುತ ದಿನನಿತ್ಯ ಕಾಡುವ ನಮ್ಮ ಜ್ವಲಂತ ಸಮಸ್ಯೆಯ ಬಗ್ಗೆ ಜನಸಾಮಾನ್ಯರ ಕಣ್ತೆರೆಸುವ ಸಂದೇಶಾತ್ಮಕ ಅಷ್ಟೇ ವೈನೋದಿಕ ರೀತಿಯ ನೃತ್ಯ- ನಾಟಕೀಯ ಆಯಾಮಗಳ ಕಟುವಾಸ್ತವದ ದೃಶ್ಯ ಚಿತ್ರ ಹಾಗೂ ಅಂತ್ಯದಲ್ಲಿ ಖಳನಾಯಕ-ದುಷ್ಟನೆಂದೇ ಪ್ರತಿಬಿಂಬಿಸಲ್ಪಟ್ಟ ರಾವಣನ ಜನಜನಿತ ದುರಭಿಪ್ರಾಯವನ್ನು ಬುಡಮೇಲು ಮಾಡುವ ಜೊತೆಗೆ ಆತನ ವಿಶಿಷ್ಟ ವ್ಯಕ್ತಿತ್ವದ ಬಗ್ಗೆ ಹೊಸ ಆಯಾಮವನ್ನು ತೆರೆದಿಡುವ ಏಕವ್ಯಕ್ತಿ ನೃತ್ಯಪ್ರದರ್ಶನ ಈ ಕಲಾ ಉತ್ಸವದ ಹೈಲೈಟ್ ಆಗಿತ್ತು.

    ಒಂದೊಳ್ಳೆ ಸಂಜೆ ಸಾರ್ಥಕವಾಗಿ ಕಲಾಪ್ರಪೂರ್ಣತೆಯೊಂದಿಗೆ ಭರಪೂರ ಮನರಂಜನೆ – ತೃಪ್ತಿಯ ಅನುಭವವನ್ನು ನೀಡಿದ ಕಲೋತ್ಸವದ ಅರ್ಥಪೂರ್ಣ ಕಾರ್ಯಕ್ರಮಗಳು ಸಮನ್ವತೆಯನ್ನು ಸಾಧಿಸಿದ್ದವು. ಉದಯೋನ್ಮುಖ ಭರತನಾಟ್ಯ ಕಲಾವಿದೆಯರಾದ ವಿದುಷಿ ರಾವಳಿ ನಾಗೇಶ್ವರ ಮತ್ತು ಜಯಶೀಲ ವಿನೋದ್ ಭಕ್ತಿಪೂರ್ಣ, ಪರಿಣತ ಅಭಿನಯದ ಅಂಗಶುದ್ಧ ನರ್ತನವನ್ನು ಹೃದ್ಯವಾಗಿ ಅರ್ಪಿಸಿದರು.

    ಅನಂತರ ಕಲಾವಿದರಾದ ಕಥಕ್ ಮತ್ತು ಸಮಕಾಲೀನ ನೃತ್ಯಗಳಲ್ಲಿ ಖ್ಯಾತರಾದ ಕೀರ್ತಿಕುಮಾರ್ ಮತ್ತು ರೂಪ ಕೃಷ್ಣಮೂರ್ತಿ ತಂಡ ‘ಗಬ್ಬು ಕಥೆ’ – ಎಂಬ ಶೀರ್ಷಿಕೆಯ ಅಣಕುವಾಡು ಮಾದರಿಯ ವಿಡಂಬನಾತ್ಮಕ ಪ್ರಹಸನವನ್ನು ಮನಮುಟ್ಟುವಂತೆ ಅಭಿನಯಿಸಿದರು. ಪ್ರಸ್ತುತ ನಗರಗಳಲ್ಲಿ ತಾಂಡವವಾಡುತ್ತಿರುವ ಪ್ರಸಕ್ತ ಸಮಸ್ಯೆಯನ್ನು ಬಹು ಮಾರ್ಮಿಕವಾಗಿ ದೃಶ್ಯವತ್ತಾಗಿ ತೆರೆದಿಟ್ಟದ್ದು ನಿಜಕ್ಕೂ ವಿಶಿಷ್ಟವಾಗಿತ್ತು. ಮೇಲ್ನೋಟಕ್ಕೆ ಈ ಕಥಾರೂಪಕ, ವಿನೋದ ಪೂರ್ಣವಾಗಿ ಕಂಡರೂ ವಾಸ್ತವ ಸತ್ಯದ ಕ್ರೂರ ವಿಡಂಬನೆಯಾಗಿ ಸಾಗುತ್ತ ನಾಗರೀಕ ಪ್ರಜ್ಞೆಯ ಬಗ್ಗೆ ಕಣ್ತೆರೆಯಿಸಲು ಮಾಡಿದ ಈ ಪ್ರಯೋಗ ಸ್ತುತ್ಯಾರ್ಹವಾಗಿತ್ತು. ಹೊರನೋಟಕ್ಕೆ ಇದೊಂದು ಸಣ್ಣ ವಿಷಯ ಎನಿಸಿದರೂ ದಿನೇ ದಿನೇ ಉಲ್ಭಣವಾಗುತ್ತಿರುವ ಈ ಕಸದ ಸಮಸ್ಯೆ, ತೀವ್ರವಾಗಿ ವ್ಯಾಪಿಸುತ್ತಿರುವ ಪರಿಸರ ಮಾಲಿನ್ಯ, ವಾಯು ಮಾಲೀನ್ಯಗಳೇ ಕಾರಣವಾಗಿ ಉಂಟಾಗುತ್ತಿರುವ ಅನಾರೋಗ್ಯ ವಾತಾವರಣದ ಪರಿಣಾಮದ ಬಗ್ಗೆ ಕ್ಷಕಿರಣ ಚೆಲ್ಲಿತು. ಈ ರಂಗನಾಟಕ, ಸುಶಿಕ್ಷಿತರ ಸಮ್ಮುಖಕ್ಕಿಂತ, ಸಾಮಾನ್ಯ ವರ್ಗದವರ ದೃಷ್ಟಿಯಿಂದ ಇದು, ಬೀದಿನಾಟಕವಾಗಿ ಪ್ರದರ್ಶನ ಕಂಡರೆ ಇನ್ನೂ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ನೃತ್ಯರೂಪದ ನಾಟಕದ ಪರಿಕಲ್ಪನೆ, ಕಲಾವಿದರ ನೃತ್ಯಾಭಿನಯ ನಿರೂಪಣೆ, ರಂಗಸಜ್ಜಿಕೆ ಮತ್ತು ಪರಿಕರಗಳ ಬಳಕೆ ಮನಮುಟ್ಟಿತು.

    ಮುಂದಿನ ಹಾಗೂ ಕಾರ್ಯಕ್ರಮದ ಅಂತಿಮ ಪ್ರಸ್ತುತಿ, ಈಗಾಗಲೇ ಪುರುಷನರ್ತಕರಾಗಿ ಖ್ಯಾತಿ ಗಳಿಸಿರುವ ಸೂರ್ಯ ಎನ್. ರಾವ್ ಪ್ರಸ್ತುತಪಡಿಸಿದ ರಾವಣನ ಬಗೆಗಿನ ಏಕವ್ಯಕ್ತಿ ನೃತ್ಯರೂಪಕ ಪ್ರದರ್ಶನ ಕಲಾವಿದರ ಆಂಗಿಕ ಚಾಕಚಕ್ಯತೆ ಅಭಿನಯ ಸಾಮರ್ಥ್ಯ, ಪಾತ್ರದ ಒಳಹೊಕ್ಕು ಅಭಿನಯಿಸುವ ತಲ್ಲೀನತೆಗೆ ಕನ್ನಡಿ ಹಿಡಿಯಿತು. ಮಹಾಕವಿ, ಮಹಾಬ್ರಾಹ್ಮಣ ರಾವಣನೇ ರಚಿಸಿದ ‘ರಾವಣಾಷ್ಟಕ’ದ ಪ್ರಭಾವಿಶಾಲಿ ಲಯಾತ್ಮಕ ಸಾಲುಗಳೊಂದಿಗೆ ಇತರ ಶ್ಲೋಕ, ಹಾಡುಗಳನ್ನು ಸಮಯೋಚಿತವಾಗಿ ಬಳಸಿಕೊಂಡದ್ದು ಅವನ ಪಾತ್ರವನ್ನು ಔನ್ನತ್ಯಕ್ಕೇರಿಸಿತು. ಮಹಾಜ್ಞಾನಿಯಾದ ಅವನ ಅಸೀಮ ಆಲೋಚನಾ ಶಕ್ತಿಯ ದ್ಯೋತಕವಾದ ಅವನ ಹತ್ತು ತಲೆಗಳು, ಅವನ ಬಾಳಿನ ಮಹತ್ವದ ಘಟನೆಗೆ ಸಾಕ್ಷಿಯಾದ ರುದ್ರವೀಣೆ ಸಹಕರಿಸದ ಈ ಸಂದರ್ಭದಲ್ಲಿ ರಾವಣ, ಶಿವಭಕ್ತಿಯನ್ನು ನಿರೂಪಿಸಲು ತನ್ನ ಕರುಳನ್ನೇ ವೀಣೆಯನಾಗಿ ನುಡಿಸಿದ ಹೃದಯ ದ್ರವಿಸಿದ ದೃಶ್ಯ ಹಾಗೂ ರಾವಣನ ಜೀವಿತದ ಕಥಾನಕದ ಆರಂಭ, ಅಂತ್ಯಗಳನ್ನು ಸಾಂಕೇತಿಸಿದ ಹೆಬ್ಬಾಗಿಲು ಅರ್ಥಪೂರ್ಣವಾಗಿತ್ತು.

    ಪ್ರಮುಖವಾಗಿ, ರಾವಣನ ವ್ಯಕ್ತಿಚಿತ್ರಕ್ಕೆ ಕಪ್ಪುಮಸಿ ಬಳೆದ ಸೀತಾಪಹರಣದ ಘಟನೆಯ ಮೂಲ ಕಾರಣ – ಅವನ ತಂಗಿ ‘ಶೂರ್ಪನಖಿ’ಯನ್ನು ವಿರೂಪಗೊಳಿಸಿ ಅವಮಾನ ಮಾಡಿದ್ದೇ ಎಂಬುದನ್ನು ಈ ರಾವಣ ಸಕಾರಣವಾಗಿ ನಿರೂಪಿಸಿದನಲ್ಲದೆ, ತನ್ನ ಸೋದರಮಾವ ಮಾರೀಚನಿಗೆ ಜಿಂಕೆರೂಪದಲ್ಲಿ ಸೀತೆಯನ್ನು ಸೆಳೆದು ತನ್ನ ಅಪಹರಣ ಕಾರ್ಯಕ್ಕೆ ಸಹಾಯ ಬಯಸುವ ಘಟನೆಯೂ ಕೂಡ ಪೂರಕವಾಗಿ ಬಂತು. ಹಾಗೂ ಕಲಾವಿದರ ಕುಚುಪುಡಿ ನೃತ್ಯ ನೈಪುಣ್ಯ ಪ್ರದರ್ಶನಕ್ಕೆ ಆನುಷಂಗಿಕವಾಗಿ ಒದಗಿ ಬಂದ ‘ಮಂಡೂಕ ಶಬ್ದಂ’ ಮೂಲಕ ಮಂಡೋದರಿಯೊಡನೆ ವಿವಾಹ ಇತ್ಯಾದಿಗಳು ಪೂರಕವಾಗಿ ಮೂಡಿಬಂದವು. ಒಟ್ಟಾರೆ ‘ರಾವಣ’ – ನಮ್ಮೊಳಗಿನ ಪೂರ್ವಗ್ರಹಪೀಡಿತ ಅಭಿಪ್ರಾಯವನ್ನು ತೊಡೆಯುವಲ್ಲಿ ಸಫಲನಾಗಿದ್ದ.

    ಎರಡೂ ರೂಪಕಗಳ ಪರಿಣಾಮದ ಔನ್ನತ್ಯಕ್ಕೆ ಬಳಸಲಾದ ರಂಗ ಪರಿಕರಗಳು, ಹಿನ್ನಲೆ ಸಂಭಾಷಣೆ – ಸಂಗೀತ, ಸಮರ್ಥ ಬೆಳಕು ಮತ್ತು ಮಲ್ಟಿ ಮೀಡಿಯಾಗಳ ಬಳಕೆ ಸೂಕ್ತವಾಗಿತ್ತು. ಡಾ. ವೀಣಾ ಮೂರ್ತಿರವರ ಮಾರ್ಗದರ್ಶನದಲ್ಲಿ ರೂಹುಗೊಂಡ, ವಿವಿಧ ಪ್ರತಿಭೆಗಳ ಕಲೆಯ ಪೋಷಣೆಗೆ ಸಂಕಲ್ಪಿಸಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ‘ಸಮನ್ವಯ ಕಲಾ ಉತ್ಸವ’ ಪ್ರತಿವರ್ಷವೂ ನವನವೋ ನ್ಮೇಷಶಾಲಿನಿಯಾಗಿ ಸಮಾಜಮುಖಿಯಾಗಿ ಕ್ರಿಯಾಶಾಲಿಯಾಗಿರುವುದು ಸ್ತುತ್ತ್ಯಾರ್ಹ ಸಂಗತಿ. ಡಾ. ವೀಣಾಮೂರ್ತಿ ಹಾಕಿಕೊಟ್ಟಿರುವ ಈ ಮೇಲ್ಪಂಕಿಯನ್ನು ಉಳಿದ ಕಲಾಸಂಸ್ಥೆಗಳು ಕೂಡ ಮುಂದುವರಿಸಿಕೊಂಡು ಹೋಗುವುದು ಅತ್ಯವಶ್ಯ.

    *** ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    baikady bharatanatyam Cultural dance Music
    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರಿನ ಕಲಾಮಂದಿರದಲ್ಲಿ ‘ಕೂಡಲಸಂಗಮ’ ದೃಶ್ಯ ರೂಪಕ | ಏಪ್ರಿಲ್ 19
    Next Article ಪುತ್ತೂರಿನ ಆನಂದಾಶ್ರಮದಲ್ಲಿ ಕಲಾದೀಪ ದಂಪತಿಗಳ ರಾಮಾಯಣ ಸಪ್ತಾಹದ ಏಳನೆಯ ಕಾರ್ಯಕ್ರಮ
    roovari

    Add Comment Cancel Reply


    Related Posts

    ಹಳೆಯಂಗಡಿಯಲ್ಲಿ ಯುಗಾದಿ ಪ್ರಯುಕ್ತ ‘ಭಾವ ಗಾನ ಯಾನ’ ಕಾರ್ಯಕ್ರಮ

    April 21, 2026

    ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಪ್ರವೇಶಾತಿ ಪ್ರಾರಂಭ

    April 21, 2026

    ಸದಾಶಿವ ಅನಂತಪುರ ಇವರ ‘ಪಂಚಮ ಸ್ಮೃತಿ’ ಸಮಾರಂಭ

    April 21, 2026

    ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಶಿಬಿರಕ್ಕೆ ಆಹ್ವಾನ

    April 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.