‘ಸಮುದಾಯ’ಕ್ಕೀಗ ಐವತ್ತು ವರ್ಷ. ಪ್ರಗತಿಪರ ಆಶಯದ ನಾಟಕಗಳನ್ನೇ ಆಡುತ್ತ ಬಂದ ‘ಸಮುದಾಯ’, ಸುವರ್ಣ ವರ್ಷದಲ್ಲಿ ಎತ್ತಿಕೊಂಡಿದ್ದು ‘ಭಗವಂತನ ಮರಣ’ ನಾಟಕವನ್ನು. ಕೆ.ಆರ್. ಮೀರಾ ಇವರ ಈ ಮಲಯಾಳಂ ಕೃತಿಗೆ ಮಲಯಾಳಂ ನಾಟಕ ರೂಪ ಕೊಟ್ಟವರು ಕೇರಳದ ಪ್ರಸಿದ್ಧ ರಂಗ ನಿರ್ದೇಶಕ ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ. ಅದನ್ನು ಕೆ. ಪ್ರಭಾಕರನ್ ಕನ್ನಡಕ್ಕೆ ಅನುವಾದಿಸಿದ್ದು, ಸ್ಯಾಮ್ ಕುಟ್ಟಿಯವರೇ ಈ ನಾಟಕವನ್ನು ನಿರ್ದೇಶಿಸಿದ್ದಾರೆ.
ಭಗವದ್ಗೀತೆಯನ್ನು ವಿಮರ್ಶಿಸಿದರೆಂಬ ಕಾರಣಕ್ಕೆ ಮಾನವತಾವಾದಿ ಪ್ರೊ. ‘ಭಗವಂತ’ರನ್ನು ಕೊಲ್ಲಲು ಸಂಘಟನೆಯೊಂದರಿಂದ ನೇಮಿಸಲ್ಪಟ್ಟ, ತಲೆಯ ತುಂಬ ದ್ವೇಷ, ಹಿಂಸೆಗಳನ್ನೇ ತುಂಬಿಕೊಂಡ ಅಮರ ಎನ್ನುವ ಯುವಕನೊಬ್ಬ, ಪಿಸ್ತೂಲು ಹಿಡಿದು ಅವರ ಮನೆಗೇ ಬರುತ್ತಾನೆ. ಕೊಲ್ಲುವ ಗಡಿಬಿಡಿಯಲ್ಲಿ ನಡೆಯುವ ಅಪಘಾತದಿಂದ ಆತ ಅವರ ಮನೆಯಲ್ಲೇ ಗಾಯಾಳುವಾಗಿ ಬಿಡುವ ಪರಿಸ್ಥಿತಿ ಬಂದುಬಿಡುತ್ತದೆ. ‘ಕೊಲ್ಲುವುದೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಬದಲಿಗೆ ಬದುಕಲು ಬಿಡುವುದು ಆದರ್ಶ’ ಎನ್ನುತ್ತ ಪ್ರೊಫೆಸರ್ ಕೈತುತ್ತಿನೊಂದಿಗೆ ಆತನ ಕೈಗೆ ಪುಸ್ತಕಗಳನ್ನೂ ಕೊಡುತ್ತ ಹೋಗುತ್ತಾರೆ. ಪಿಸ್ತೂಲು ಹಿಡಿದ ಕೈ ಪುಸ್ತಕಗಳನ್ನು ಹಿಡಿಯುತ್ತದೆ. ‘ಪುಸ್ತಕಕ್ಕಿಂತ ದೊಡ್ಡ ಆಯುಧವಿಲ್ಲ’ ಎನ್ನುತ್ತ ಮತ್ತೆ ಮತ್ತೆ ಓದಿಸುತ್ತಾರೆ. ಆ ಹುಡುಗ, ತನ್ನ ಸುತ್ತಲಿನ ಜನ ತೋರಿಸಿದ ಪ್ರೀತಿ, ‘ಭಗವಂತ’ರ ಮಾನವೀಯ ಸ್ಪರ್ಶ, ಬಸವಣ್ಣನವರ ವಚನಗಳ ನಿರಂತರ ಸಿಂಚನ. ಪುಸ್ತಕಗಳ ಸಹವಾಸದಿಂದ ಬದಲಾಗುತ್ತಾನೆ. ‘ಜ್ಞಾನದ ಬಲದಿಂದ ಆಜ್ಞಾನದ ಕೇಡ’ನ್ನು ನೋಡಲಾರಂಭಿಸುತ್ತಾನೆ. ದ್ವೇಷದ ಜಾಗವನ್ನು ಪ್ರೀತಿ ತುಂಬುತ್ತದೆ.

ಈ ರಂಗಕೃತಿ, ಸುತ್ತಮುತ್ತ ಕಾಣುತ್ತಿರುವ ಧಾರ್ಮಿಕ ಅಸಹಿಷ್ಣುತೆ ಮತ್ತು ಕ್ರೌರ್ಯದ ಕಾರಣಗಳನ್ನು ಹುಡುಕುತ್ತ ಹೋಗುವ ಪ್ರಯತ್ನ ಮಾಡುತ್ತದೆ. ಬಹುತೇಕ ನಿಂತೇಹೋಗಿರುವ ಸಂವಾದ, ಚರ್ಚೆಗಳು, ಹರಡುತ್ತಿರುವ ಹಸಿಹಸಿ ಸುಳ್ಳುಗಳು, ದ್ವೇಷದ ಮಾತುಗಳು, ಯುವಜನತೆಯಲ್ಲಿ ವಿಷ ತುಂಬುತ್ತಿವೆ. ಹಿಂಸೆಗೆ ಪ್ರೇರೇಪಿಸುತ್ತಿವೆ. ದ್ವೇಷದಾಟದ ದಾಳವಾದ ‘ಅಮರ’ನ ದುರಂತ ಬದುಕಿನ ಮೂಲಕ ನಾಟಕ ಇಂಥದೊಂದು ಸ್ಥಿತಿಯನ್ನು ತೋರಿಸುತ್ತ, ಎಚ್ಚರಿಸುತ್ತ ಹೋಗುತ್ತದೆ.

ಅಮರ್‌ಗೆ ತಾನು ಪ್ರೀತಿಸಿದ ಕಾವೇರಿ ಧಾರ್ಮಿಕ ದಂಗೆಯೊಂದರಲ್ಲಿ ಕ್ರೂರ ಸಾವನ್ನು ಕಾಣುವ ಸ್ಥಿತಿ ಬರುತ್ತದೆ. ಸುಂದರ ಬದುಕು ಮುರುಟಿಹೋಗುವ ದುರಂತವಿದು. ಒಂದು ‘ದಿಟ್ಟ ನಾಟಕ’ ಕೊನೆಯ ಹಂತಕ್ಕೆ ಬಂದಿದೆ. ಆದರೆ ‘ಭಗವಂತ’ ಸತ್ತಿಲ್ಲ. ಅವರು ‘ಅಮರ’ನಲ್ಲಿ ತುಂಬಿದ ಮಾನವೀಯ ಗುಣಗಳಲ್ಲಿ ಅಮರರಾಗಿದ್ದಾರೆ. ಈಗ ಅಮರ ಅವರ ಸ್ಥಾನಕ್ಕೆ ಬಂದಿದ್ದಾನೆ. ಅವರದೇ ಬಿಳಿಯ ವಸ್ತ್ರ ಹೊದ್ದಿದ್ದಾನೆ. ಕಾಲು ಮುರಿದ ಮಲ್ಲಪ್ಪ ಈಗ ಗಾಲಿ ಖುರ್ಚಿಯಲ್ಲಿದ್ದಾನೆ. ಪ್ರೊಫೆಸರರ ಪೀಠವನ್ನು ಹತ್ತಿ ನಿಂತಿರುವ ಅಮರನ ಕೈಯಲ್ಲಿ ಪ್ರೊಫೆಸರ್ ತಿನ್ನಿಸುತ್ತಿದ್ದ ಕೈತುತ್ತಿನ ಹರಿವಾಣವಿದೆ. ಆತನ ಮುಖದಲ್ಲಿ ಮಲ್ಲಪ್ಪನಂಥ ಎಲ್ಲರನ್ನೂ ಸರಿದಾರಿಗೆ ತರಬಲ್ಲ ಆತ್ಮವಿಶ್ವಾಸವಿದೆ. ನಿರ್ದೇಶಕರು ಚಿತ್ರಿಕೆಯಂಥ ಸರಳ ಸೆಟ್‌ನಲ್ಲಿ ನಾಟಕ ಕಟ್ಟುತ್ತಾರೆ.

ಗಾಂಧಿ ಚಿತ್ರ, ಬಸವಣ್ಣನವರ ಮೂರ್ತಿ ನಾಟಕದ ಆಶಯವನ್ನು ಧ್ವನಿಸುವಂತಿವೆ. ರಂಗದ ಮಧ್ಯಭಾಗದ ಪೀಠ ಮತ್ತು ಅದರ ಸುತ್ತಲಿನ ಪುಟ್ಟ ಕೊಳದ ಬಳಕೆ ಪ್ರಭಾವಶಾಲಿಯಾಗಿದೆ. ಆರಂಭದಲ್ಲಿ ಸಮಾಜದ ಕೊಳೆ ತೊಳೆಯುವುದನ್ನು ಸಂಕೇತಿಸುವಂತೆ ಪ್ರೊಫೆಸರ್ ಬಳಸುವ ಶುಭ್ರ ನೀರು ಅವರ ಕೊಲೆಯಾಗುತ್ತಿದ್ದಂತೆ ಕೆಂಬಣ್ಣಕ್ಕೆ ತಿರುಗುವುದು ಕಠೋರ ವ್ಯಂಗ್ಯವಾಗಿ ತೋರುತ್ತದೆ. ಕಾವೇರಿ, ಅಮರನ ದೃಶ್ಯಗಳ ನಿರ್ಮಿತಿ ಕಲಾತ್ಮಕವಾಗಿದೆ. ಅಮರ-ಪ್ರೊಫೆಸರರ ದೃಶ್ಯಗಳು ಶಕ್ತಿಯುತವಾಗಿವೆ. ಮಾತೇ ಮುಖ್ಯವಾದ ಇದರಲ್ಲಿ ಮನಮುಟ್ಟುವ ಮಾತುಗಳಿವೆ. ನಾಟಕದುದ್ದಕ್ಕೂ ವಚನಗಳ ವಿಪುಲ ಬಳಕೆ ಇದೆ. ಕೆಲವೊಮ್ಮೆ ವಚನಗಳ ಭಾರ ಜಾಸ್ತಿಯಾದಂತೆನಿಸುತ್ತದೆ. ಹಸುಗಳ ಕೂಗನ್ನು ಸೂಚ್ಯವಾಗಿ ಬಳಸಲಾಗಿದೆ. ಬೆಳಕಿನ ವಿನ್ಯಾಸದಲ್ಲಿ ಸೂಕ್ಷ್ಮತೆ ಕಾಣುತ್ತದೆ. ವಸ್ತ್ರವಿನ್ಯಾಸದಲ್ಲೂ, ಅವುಗಳ ಬಣ್ಣಗಳಲ್ಲೂ Drama ಸಾಂಕೇತಿಕತೆ ಇದೆ. ಇಂಥ ನಾಟಕವನ್ನು ಪ್ರಭಾವಶಾಲಿಯಾಗಿ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ನಟ-ನಟಿಯರ ಪಾತ್ರ ಮಹತ್ವದ್ದು. ಅಂಥ ಪಾತ್ರಗಳನ್ನು ಪಾತ್ರಧಾರಿಗಳು ತುಂಬ ಚೆನ್ನಾಗಿ ನಿರ್ವಹಿಸಿದ್ದಾರೆ. ಅಭಿಷೇಕ್, ಕಾವೇರಿ ಶ್ರೀಧರ್, ಸಿದ್ಧರಾಮು. ಚೇತನ್ ಗಂಗಾ. ಉಲ್ಲಾಸ್, ಸುನೀಲ್ ಕುಮಾರ್, ಪದ್ಮಾ ಶಿವಮೊಗ್ಗ (ಇವರು ಸಹ ನಿರ್ದೇಶಕಿ ಕೂಡ), ಕಾವ್ಯ ಅಚ್ಯುತ, ರಾಣಿ ವಿಶ್ವನಾಥ್, ನಾಗಲಕ್ಷ್ಮಿ, ಫೈರೋಜ್, ದೀಪಿತ್, ಮನೋಜರ ತಂಡಕ್ಕೆ ಮೆಚ್ಚುಗೆಗಳು ಸಲ್ಲುತ್ತವೆ.


– ಕಿರಣ ಭಟ್ ಹೊನ್ನಾವರ
