ನಿಡ್ಲೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಮತ್ತು ಬೆಳ್ತಂಗಡಿ ಘಟಕದ ಸಹಯೋಗದಲ್ಲಿ ನಡೆಯುವ 2026-27ನೇ ಸಾಲಿನ ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ತರಬೇತಿ ಕಾರ್ಯಕ್ರಮವು ದಿನಾಂಕ 19 ಜೂನ್ 2026ರ ಶುಕ್ರವಾರದಂದು ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀಯುತ ನಿಡ್ಲೆ ಗೋವಿಂದ ಭಟ್ ಉದ್ಘಾಟಿಸಿ, “ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಪಟ್ಲ ಫೌಂಡೇಶನ್ ವತಿಯಿಂದ ಶಾಲೆಗಳಲ್ಲಿ ನಾಟ್ಯ ತರಬೇತಿ ನಡೆಯುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಿ” ಎಂದು ಹೇಳಿದರು. ಫೌಂಡೇಶನ್ನಿನ ಕೇಂದ್ರ ಸಮಿತಿಯ ಟ್ರಸ್ಟಿಗಳೂ ಆಗಿರುವ ಸಂಘಟಕರಾದ ಶ್ರೀ ಭುಜಬಲಿ ಬಿ. ಧರ್ಮಸ್ಥಳ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಉತ್ತಮ ಕಲಾವಿದರಾದ ಈಶ್ವರ ಪ್ರಸಾದ್ ಅವರು ಗುರುಗಳಾಗಿ ಸಿಗುತ್ತಿರುವುದು ನಿಮ್ಮ ಭಾಗ್ಯ. ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನವನ್ನು ಕಲಿಯಿರಿ. ಇದು ನಿಮ್ಮ ಭವಿಷ್ಯಕ್ಕೆ ಪೂರಕ” ಎಂದು ಕಿವಿ ಮಾತು ಹೇಳಿದರು. ಪಟ್ಲ ಫೌಂಡೇಶನ್ ಟ್ರಸ್ಟಿನ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು. ಪಟ್ಲ ಶ್ರೀ ಸತೀಶ್ ಶೆಟ್ಟಿ ಇವರ ಕಾರ್ಯವೈಖರಿಯನ್ನು ಪ್ರಶಂಶಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಸ್ಟಿನ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಅವರು ಕಳೆದ ನಾಲ್ಕು ವರ್ಷಗಳಿಂದ ವಿವಿಧ ಶಾಲೆಗಳಲ್ಲಿ ನಡೆಯುತ್ತಿರುವ ಯಕ್ಷನಾಟ್ಯ ಅಭಿಯಾನ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ ಪ್ರಸ್ತುತ ಸಾಲಿನಲ್ಲಿ ನಡೆಯುವ ನಾಟ್ಯ ಅಭಿಯಾನ ಕಾರ್ಯಕ್ರಮದ ಬಗ್ಗೆ ಮತ್ತು ಪಟ್ಲ ಫೌಂಡೇಶನ್ ಟ್ರಸ್ಟ್ ಕಾರ್ಯ ಚಟುವಟಿಕೆಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಸ್ಟಿನ ಬೆಳ್ತಂಗಡಿ ಘಟಕದ ಕಾರ್ಯದರ್ಶಿಗಳಾಗಿರುವ ಹಾಗೂ ಹಿರಿಯ ಚೆಂಡೆ ಮೃದಂಗ ವಾದಕರಾದ ಶ್ರೀ ಶಿತಿಕಂಠ ಭಟ್ ಅವರು ಯಕ್ಷಗಾನದಿಂದ ಪುರಾಣ ಕಥೆಗಳ ಅರಿವು ಮೂಡುತ್ತದೆ. ಇದು ನಿಮ್ಮ ಶಿಕ್ಷಣಕ್ಕೂ ಅನುಕೂಲ ಎಂದು ನುಡಿದು ಶುಭ ಕೋರಿದರು.
ಯಕ್ಷ ನಾಟ್ಯ ಗುರುಗಳಾದ ಶ್ರೀ ಈಶ್ವರ ಪ್ರಸಾದ್ ಪಿ.ವಿ. ಇವರು ಯಕ್ಷಗಾನ ಕಲಿಕೆಯ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕಲಿತ ವಿಷಯಗಳನ್ನು ಅಭ್ಯಾಸ ಮಾಡುತ್ತಾ ಮುಂದುವರೆದರೆ ಭವಿಷ್ಯವಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಗೌಡ ಇವರು ವಹಿಸಿದ್ದರು. ಶಿಕ್ಷಕಿ ಶ್ರೀಮತಿ ಶೋಲಿ ಮೇಡಂ ನಿರೂಪಿಸಿ, ಸುಚಿತ್ರರವರು ಸ್ವಾಗತಿಸಿ, ಪ್ರಭಾರ ಮುಖ್ಯ ಶಿಕ್ಷಕರಾದ ಶರತ್ ಕುಮಾರ್ ತುಳುಪುಳೆ ವಂದಿಸಿದರು. ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಬೆಳ್ತಂಗಡಿ ಘಟಕದ ಪದಾಧಿಕಾರಿಗಳು ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
