ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 06 ಜೂನ್ 2026ರಂದು ‘ಕಾವ್ಯಾಂ ವ್ಹಾಳೊ-15’ ಶೀರ್ಷಿಕೆಯಡಿ ಕವಿ ಗೋಷ್ಠಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಪ್ರಾಸ್ತಾವಿಕವಾಗಿ ಮಾತಾನಾಡಿ “ಕೊಂಕಣಿ ಸಂಗೀತ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ, ನಾಟಕ ಕ್ಷೇತ್ರದಲ್ಲಿ ಹಾಗೂ ಇತರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕೊಂಕಣಿ ಸಮುದಾಯದ ವ್ಯಕ್ತಿಗಳನ್ನು ಗುರುತಿಸಿ ಅವರ ಕಾರ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗಾಗಿ ಸನ್ಮಾನಿಸುವ ಕೆಲಸವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಡುತ್ತಿದೆ” ಎಂದು ಹರ್ಷವ್ಯಕ್ತಪಡಿಸಿ ಹಾಜರಿರುವ ಎಲ್ಲರನ್ನೂ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾದ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಮಂಗಳೂರು ಇಲ್ಲಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ವಿಜಯಲಕ್ಷ್ಮೀ ನಾಯಕ್ರವರು ಮಾತನಾಡಿ “ಕೊಂಕಣಿ ಒಂದು ಮಹಾನ್ ಭಾಷೆ. ಭಾರತದ ಪ್ರಮುಖ ಧರ್ಮಗಳಾದ ಹಿಂದು, ಮುಸ್ಲಿಂ, ಕೈಸ್ತ ಸಮದಾಯಗಳ ಜನರು ಮಾತಾನಾಡುವ ಭಾಷೆ. ಐದು ಲಿಪಿಗಳಲ್ಲಿ ಬರೆಯುವ ಭಾಷೆಯಾಗಿದೆ. ಹಾಗಾಗಿ ಕೊಂಕಣಿ ಭಾಷೆಯು ಬಹಳಷ್ಟು ಅನನ್ಯತೆಯನ್ನು ಹೊಂದಿರುವ ಭಾಷೆಯಾಗಿ ಉಳಿದಿದೆ. ಕೊಂಕಣಿಯು ಭಾರತದ ಸಂವಿಧಾನದ 8ನೇ ಪರಿಚ್ಛೇದಲ್ಲಿದ್ದು, ಭಾರತದ ಅಧಿಕೃತವಾಗಿ ಮಾನ್ಯತೆ ಪಡೆದ ಭಾಷೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ” ಎಂದು ಕೊಂಕಣಿಯ ಶ್ರೀಮಂತಿಕೆಯನ್ನು ಕೊಂಡಾಡಿದರು.
ಕೊಂಕಣಿ ಅಕಾಡೆಮಿ ಸನ್ಮಾನವನ್ನು ಸ್ವೀಕರಿಸಿ ಮಾತಾನಾಡಿದ ಡೆಪ್ಯೂಟಿ ಚೀಫ್ ಟ್ರಾಫಿಕ್ ವಾರ್ಡನ್ ಆಗಿರುವ ಶ್ರೀ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್ ಇವರು “ಜಾತಿ ಧರ್ಮ ಮನೆಯಲ್ಲಿರಲಿ, ದೇವರು ಹೃದಯದಲ್ಲಿರಲಿ, ಈ ಜೀವ ಈ ಭೂಮಿಗೆ ಬೆಳಕಾಗಿರಲಿ” ಎಂದು ಕಾರ್ಯಕ್ರಮಕ್ಕೆ ಶುಭಕೋರಿ, ಈ ಲೋಕದಲ್ಲಿ ಜನಿಸಿದ ಮೇಲೆ ಸಮಾಜಕ್ಕೆ ಯಾವುದಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಿ, ಬೇರೆಯವರಿಗೆ ಉಪಕಾರಿಯಾಗಿರಬೇಕೆಂದು ಕರೆಕೊಟ್ಟರು.
ಖ್ಯಾತ ಕವಯಿತ್ರಿಯಾದ ಶ್ರೀಮತಿ ಫೆಲ್ಸಿ ಲೋಬೊ ದೆರೆಬಯ್ಲ್ರವರು ಕವಿಗೋಷ್ಠಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ವಲೇರಿಯನ್ ಮೊರಾಸ್ ತಾಕೊಡೆ, ಸ್ಮಿತಾ ಶೆಣೈ, ರೆಮಿ ಕಾಟಿಪಳ್ಳ, ಡಾ. ಫ್ಲಾವಿಯಾ ಕ್ಯಾಸ್ತೆಲಿನೊ, ಅನಿಲ್ ಜೆ. ಕುವೆಲ್ಲೊ, ರಾಧಿಕ ಪೈ, ಪೆದ್ರು ಪ್ರಭು ತಾಕೊಡೆ, ಮರ್ಲಿನ್ ಮಸ್ಕರೇನ್ಹಸ್, ಅಲ್ರೀಶಾ ರೊಡ್ರಿಗಸ್ ಮತ್ತು ಲವೀನ ದಾಂತಿ ಇವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀಮತಿ ಸಪ್ನಾ ಮೇ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ಶ್ರೀ ನವೀನ್ ಲೋಬೊ ಉಪಸ್ಥಿತರಿದ್ದರು.
