Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜೂನ್ 13ರಿಂದ

    June 11, 2026

    ವಿಪ್ರ ವೇದಿಕೆಯ ಸಭಾಂಗಣದಲ್ಲಿ ತಿಂಗಳ ಕಾರ್ಯಕ್ರಮ

    June 11, 2026

    ಮೇಘಮೈತ್ರಿ ಸಮ್ಮೇಳನ ಸವಿನೆನಪಿನ ದತ್ತಿ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ಜುಲೈ 07

    June 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ಹೊಸ ಬಗೆಯ ಅನುವಾದ ಚರಿತ್ರೆ
    Article

    ಪುಸ್ತಕ ವಿಮರ್ಶೆ | ಹೊಸ ಬಗೆಯ ಅನುವಾದ ಚರಿತ್ರೆ

    June 11, 2026No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಭಾಷಾಂತರ ಯುಗ’ (1810-1930)
    ಡಾ. ಬಿ. ಜನಾರ್ದನ ಭಟ್
    ಪ್ರಕಾಶನ : ವರ್ಣ ಪಬ್ಲಿಕೇಶನ್ ಬೆಂಗಳೂರು. 2025, ಬೆಲೆ ರೂ.350/-
    ಪುಟಗಳು : 310. ಸಂಪರ್ಕ : 9481145775

    ಇದು ಡಾ. ಬಿ. ಜನಾರ್ದನ ಇವರ ಇತ್ತೀಚಿನ ಅಧ್ಯಯನಪೂರ್ಣ ಕೃತಿ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಭಾಷಾಂತರ ಯುಗವೊಂದು (1810-1930) ಆಗಿ ಹೋದುದನ್ನು ಇದೇ ಮೊದಲ ಬಾರಿಗೆ ಬೆಳಕಿಗೆ ಹಿಡಿದು ನವನವೀನ ಸಂಗತಿಗಳನ್ನು ಮುನ್ನೆಲೆಗೆ ತಂದು ಸಮೀಚೀನವಾಗಿ ಇಲ್ಲಿ ವಿಶ್ಲೇಷಿಸಲಾಗಿದೆ. ಇದೊಂದು ಹೊಸ ರೀತಿಯಲ್ಲಿ ಕನ್ನಡ ಭಾಷಾಂತರ ಚರಿತ್ರೆಯನ್ನು ಖಚಿತವಾಗಿ ನಿರೂಪಿಸುವ ಪ್ರಯತ್ನವೂ ಆಗಿದೆ.

    ಆಧುನಿಕ ಕನ್ನಡ ಸಾಹಿತ್ಯ ಸಾಕಷ್ಟು ಶ್ರೀಮಂತವಾದುದು; ಅಷ್ಟೇ ಸಮೃದ್ಧವಾದುದು. ಹೊಸಗನ್ನಡ ಸಾಹಿತ್ಯ ಆರಂಭವಾದದ್ದೇ ಅನುವಾದಗಳ ಮೂಲಕ. ಡಾ. ಬಿ. ಜನಾರ್ದನ ಭಟ್ ಅವರು ನಮ್ಮ ನಾಡಿನ ಹೆಸರಾಂತ ಅನುವಾದಕರಲ್ಲಿ ಒಬ್ಬರು. ಭಾಷಾಂತರ ಕಲೆಯಲ್ಲಿ ಅವರು ಸಿದ್ಧಹಸ್ತರು. ಜಗತ್ತಿನ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ಭಾಷಾಂತರಿಸಿ ಕನ್ನಡ ಸಹೃದಯರಿಗೆ ಉಣಬಡಿಸಿದ ಕೀರ್ತಿಗೂ ಅವರು ಭಾಜನರಾಗಿದ್ದಾರೆ. ಹೊಸಗನ್ನಡ ಸಾಹಿತ್ಯ ತುಂಬಿ ತೀವಿ ಬರಲು ಅನುವಾದ ಹೇಗೆ ಕಾರಣವಾಯಿತು ಎಂಬುದನ್ನು ಆಧಾರ ಸಹಿತವಾಗಿ ಇಲ್ಲಿ ಬೆಳಕಿಗೆ ಹಿಡಿಯಲಾಗಿದೆ.

    ಕನ್ನಡದ ಆಧುನಿಕ ಗದ್ಯವನ್ನು ರೂಪಿಸುವಲ್ಲಿ 19ನೆಯ ಮತ್ತು 20ನೆಯ ಶತಮಾನಗಳ ಗದ್ಯ ಅನುವಾದಗಳ ಕೊಡುಗೆ ದೊಡ್ಡದು. ಅದರಲ್ಲಿಯೂ 19ನೆಯ ಶತಮಾನದಲ್ಲಿ ನಡೆದ ಅನುವಾದ ಪ್ರಕ್ರಿಯೆಗಳು ಇದರಲ್ಲಿ ಹೇಗೆಲ್ಲ ಪ್ರಮುಖವಾದ ಪಾತ್ರವನ್ನು ವಹಿಸಿವೆ ಎಂಬುದನ್ನು ಇಲ್ಲಿ ಲೋಕ ಸಮ್ಮುಖಗೊಳಿಸಲಾಗಿದೆ. ಅನುವಾದಗಳ ಮೂಲಕ ಆಧುನಿಕ ಕನ್ನಡ ಗದ್ಯ ವಿಕಾಸ, ಕಥನ ಸಾಹಿತ್ಯ, ನಾಟಕ ಹಾಗೂ ಕವಿತೆಗಳ ಅನುವಾದ ಕಾರ್ಯಗಳು; ಈ ಪರಂಪರೆಯನ್ನು ರೂಪಿಸಿದ ಚುರಮುರಿ, ಪಂಜೆ, ಗೋವಿಂದ ಪೈ, ಹಟ್ಟಿಯಂಗಡಿ, ಬಿ.ಎಂ.ಶ್ರೀ, ಎಸ್. ಅನಂತನಾರಾಯಣ ಮೊದಲಾದವರ ಸಾಧನೆಗಳನ್ನು ಇಲ್ಲಿ ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆ.

    ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪಡಿಮೂಡಿದ ಭಾಷಾಂತರ ಯುಗದ ಸ್ಪಷ್ಟ ಚಿತ್ರಣ ಇಲ್ಲಿದೆ. ಅದನ್ನು ಸ್ಪಷ್ಟವಾಗಿ, ನಿರ್ದುಷ್ಟವಾಗಿ
    ಆರೈದು ಕೊಟ್ಟಿರುವುದು ಈ ಕೃತಿಯ ಹೆಗ್ಗಳಿಕೆ. ಭಾಷಾಂತರಗಳ ಮೂಲಕ ಹೊಸಗನ್ನಡ ಗದ್ಯಕ್ಕೆ ಸೂಕ್ತವಾದ ನುಡಿಗಟ್ಟುಗಳನ್ನು ರೂಪಿಸಿದ ಮತ್ತು ಸೃಜನಶೀಲ ಗದ್ಯ ಬರವಣಿಗೆಗೆ ಪ್ರೇರಣೆ ನೀಡಿದ ಐದು ವಿದ್ಯಮಾನಗಳ ವಿವರಣೆ ವಿಶ್ಲೇಷಣೆ ಈ ಕೃತಿಯಲ್ಲಿ ಒಡೆದು ಕಾಣುವ ಅಂಶ. ಅವು ಇಂತಿವೆ.

    1. ಮುಮ್ಮಡಿ ಕೃಷ್ಣರಾಜ ಒಡೆಯರ ಕೊಡುಗೆ : ಹತ್ತೊಂಬತ್ತನೆಯ ಶತಮಾನದ ಎರಡನೆಯ ದಶಕದಿಂದಾರಭಿಸಿ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ ರಾಜಾಶ್ರಯದಲ್ಲಿ ನಡೆದ ಆಧುನಿಕ ಕನ್ನಡ ಗದ್ಯ ಕೃತಿಗಳ ದೊಡ್ಡ ಸಾಹಿತ್ಯ ಮತ್ತು ಗದ್ಯದ ನುಡಿಗಟ್ಟುಗಳ ನಿರ್ಮಾಣ. ಈ ಕಾಲದಲ್ಲಿ ಸಂಸ್ಕೃತ ಕಾವ್ಯಗಳ ಗದ್ಯ ರೂಪಾಂತರಗಳು ಸೃಷ್ಟಿಯಾದವು.

    2. ಮಿಷನರಿಗಳ ಅನುವಾದಗಳು : ಮಂಗಳೂರು, ಬಳ್ಳಾರಿ, ಬೆಂಗಳೂರು ಮುಂತಾದ ಕೇಂದ್ರಗಳಲ್ಲಿ ಮಿಷನರಿಗಳು ಮಾಡಿದ ಬೈಬಲ್ ಭಾಷಾಂತರ ಮತ್ತು ಇತರ ಅನುವಾದಗಳು. ಮಿಷನರಿಗಳ ಪಠ್ಯಪುಸ್ತಕ ರಚನೆಯ ಸಂದರ್ಭದಲ್ಲಿ ಆದ ಕಿರುಗದ್ಯಗಳ ಅನುವಾದಗಳು. ಮಂಗಳೂರು ಕೇಂದ್ರದಲ್ಲಿ ರೆI ಹರ್ಮನ್ ಮೋಗ್ಲಿಂಗ್ ಅವರ (ಕೆಲವೊಮ್ಮೆ ರೆ। ವೈಗ್ಗೆಯವರ ಜತೆಗೆ ಮಾಡಿದ) ಕೆಲಸಗಳು ಅನುವಾದ, ಸೃಜನಶೀಲ ಕೃತಿರಚನೆ ಮತ್ತು ‘ಮಂಗಳೂರ ಸಮಾಚಾರ’ ಪತ್ರಿಕೆಯ ಮೂಲಕ ರೂಪಿಸಿದ ಆಧುನಿಕ ಕನ್ನಡ ಗದ್ಯದ ಮಾದರಿ.

    3. ವೆಂಕಟಾಚಾರ್ಯರ ಅನುವಾದಗಳು : ಕನ್ನಡ ಕಾದಂಬರಿ ಪಿತಾಮಹ ಬಿ. ವೆಂಕಟಾಚಾರ್ಯರು 1876ರಿಂದ ಪ್ರಾರಂಭಿಸಿ ಬಂಗಾಳಿ ಕಾದಂಬರಿಗಳನ್ನು ಅನುವಾದಿಸುವ ಮೂಲಕ ಆಧುನಿಕ ಕಾದಂಬರಿ ಪ್ರಕಾರವನ್ನು ಕನ್ನಡಕ್ಕೆ ಪರಿಚಯಿಸಿದ್ದು.

    4. ಪ್ರಾರಂಭಿಕ ಘಟ್ಟದ ಬಿಡಿ ರೂಪಾಂತರಗಳು : ಹತ್ತೊಂಬತ್ತನೆಯ ಶತಮಾನದಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಲು ಉತ್ಸಾಹ ತಾಳಿದ ಶಿಕ್ಷಕರು ಮತ್ತು ಸಾಹಿತ್ಯಾಸಕ್ತ ವಿದ್ಯಾವಂತರು ಬಗೆಬಗೆಯ ರೂಪಾಂತರ ಪ್ರಕ್ರಿಯೆಗಳಿಂದ ರಚಿಸಿದ ಕಾದಂಬರಿಯ ಗಾತ್ರದ ಕಥಾನಕಗಳು ಮತ್ತು ಕಾದಂಬರಿಗಳ ಅನುವಾದಗಳು.

    5. ಗಳಗನಾಥರ ಅನುವಾದಗಳು : ಮರಾಠಿಯಿಂದ ರೂಪಾಂತರಿಸಿದ ಮತ್ತು ತಾವು ಸ್ವತಃ ರಚಿಸಿದ ಐತಿಹಾಸಿಕ ಕನ್ನಡ ಕಾದಂಬರಿಗಳನ್ನು ಮನೆಮನೆಗೆ ಒಯ್ದು ಮಾರಾಟ ಮಾಡಿ ಕನ್ನಡಿಗರಿಗೆ ಕಾದಂಬರಿ ಓದಿನ ರುಚಿ ಹಿಡಿಸಿದ ಗಳಗನಾಥರ ಏಕಾಂಗಿ ಪ್ರಯತ್ನ. ಗಳಗನಾಥರು ಇಪ್ಪತ್ತನೆಯ ಶತಮಾನದ ಪ್ರಾರಂಭದ ನಾಲ್ಕು ದಶಕಗಳಲ್ಲಿ ಕಾದಂಬರಿ ಸಾಮ್ರಾಟರಾಗಿ ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದ್ದರ ವಿವರವಿಲ್ಲಿದೆ.

    ಅನುವಾದ ಕ್ಷೇತ್ರಕ್ಕೆ ಗೋವಿಂದ ಪೈಗಳ ಕೊಡುಗೆ ಅಸಾಧಾರಣವಾದುದು. ಅವರು ಮಾಡಿದ ಅನುವಾದದ ಲಕ್ಷಣಗಳನ್ನು ಡಾ. ಭಟ್ ಅವರು ಹೀಗೆ ಪಟ್ಟಿ ಮಾಡಿ ತೋರಿಸಿಕೊಟ್ಟಿದ್ದಾರೆ. ಒಂದು ವಿವಿಧ ಭಾಷೆಗಳ ನಡುವೆ ನಡೆದ ಕೊಡು ಕೊಳ್ಳುವಿಕೆಗಳಾಗಿವೆ. ಎರಡು – ಅವು ಕವಿತೆ, ನಾಟಕ, ಕಾವ್ಯ ಕೃತಿಗಳು, ಧರ್ಮ ಬೋಧನೆಯ ಗ್ರಂಥಗಳು ಇತ್ಯಾದಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿವೆ. ಮೂರು ಭಾಷಾಂತರ, ರೂಪಾಂತರ, ಪ್ರೇರಣೆ, ಮರುನಿರೂಪಣೆ, ಸಂಕ್ಷೇಪಾನುವಾದ ಇತ್ಯಾದಿ ಅನುವಾದದ ಹಲವು ಬಗೆಗಳನ್ನು ಪೈ ಅವರ ಅನುವಾದ ಕಾರ್ಯದಲ್ಲಿ ಕಾಣಬಹುದು ಎಂಬುದನ್ನು ಉದಾಹರಣೆ ಸಹಿತ ಲೋಕ ಮುಖಕ್ಕೆ ಅನಾವರಣಗೊಳಿಸಿರುವುದು ಈ ಕೃತಿಯ ಹಿರಿಮೆ. ಗೋವಿಂದ ಪೈಗಳು ‘ಅನುವಾದ’ ಎನ್ನುವುದನ್ನು ವಿಶಾಲಾರ್ಥದಲ್ಲಿ ಸ್ವೀಕರಿಸಿದ್ದರು. ಅನುವಾದ ಅಂದರೆ ಅವರಿಗೆ ಸಾಹಿತ್ಯ ಕೃತಿಗಳ ಭಾಷಾಂತರ, ರೂಪಾಂತರ, ಪ್ರಭಾವ-ಪ್ರೇರಣೆ ಇತ್ಯಾದಿ ಮಾದರಿಗಳಲ್ಲಿ ಇನ್ನೊಂದು ಭಾಷೆಯಲ್ಲಿ ಮರುಸೃಷ್ಟಿ ಇವು ಮಾತ್ರವೇ ಆಗಿರಲಿಲ್ಲ. ಸಾಹಿತ್ಯ ಪ್ರಕಾರಗಳನ್ನು ಪರಭಾಷೆಯಿಂದ ತಂದುಕೊಳ್ಳುವುದು ಕೂಡ ಅನುವಾದದ ಒಂದು ಬಗೆಯೆಂದೇ ಅವರು ತಿಳಿದಿದ್ದುದಕ್ಕೆ ಅವರ ಮಾತುಗಳಲ್ಲಿ ಸಾಕ್ಷ್ಯಗಳು ಸಿಗುತ್ತವೆ ಎಂಬುದನ್ನು ಇಲ್ಲಿ ಲೇಖಕರು ತೋರಿಸಿಕೊಟ್ಟಿದ್ದಾರೆ.

    ಮೂಲಭಾಷೆಗಳಿಂದಲೇ ಅನುವಾದ !

    ಗೋವಿಂದ ಪೈಗಳ ಬಹುಭಾಷಾ ಸಾಮರ್ಥ್ಯಕ್ಕೆ ಒಂದು ಶಾಶ್ವತ ಸಾಕ್ಷಿ ಎಂದರೆ ಅವರು ಜರ್ಮನ್, ಫ್ರೆಂಚ್, ಜಪಾನೀ, ಉರ್ದು ಮತ್ತು ಇಂಗ್ಲೀಷ್ ಭಾಷೆಗಳಿಂದ ಕನ್ನಡಕ್ಕೆ ಅಥವಾ ಇಂಗ್ಲೀಷಿಗೆ ಮಾಡಿರುವ ಅನುವಾದಗಳು. (ಜರ್ಮನ್, ಫ್ರೆಂಚ್ ಮತ್ತು ಉರ್ದು ಭಾಷೆಗಳಿಂದ ಇಂಗ್ಲೀಷ್ ಭಾಷೆಗೂ ಅನುವಾದಿಸಿದ್ದಾರೆ). ಮದರಾಸಿನ ‘ದ ಮಾಡರ್ನ್ ವರ್ಲ್ಡ್’ ಮಾಸಿಕ ಪತ್ರಿಕೆಯಲ್ಲಿ 1911-1912ರಲ್ಲಿ ಪೈಗಳು ಜರ್ಮನ್ ಮತ್ತು ಫ್ರೆಂಚ್ ಭಾಷೆಗಳಿಂದ ಕವಿತೆಗಳನ್ನು, ಆಯಾಯ ಭಾಷೆಗಳ ಛಂದಸ್ಸಿನಲ್ಲಿಯೇ ಇಂಗ್ಲೀಷ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಒಂದು, ಜರ್ಮನ್ ಕವಿ ಹೈನಿಕ್ ಹೀನ್ ನ ಒಂದು ಕವಿತೆಯನ್ನು ಇಂಗ್ಲೀಷ್ ಗೆ The Voice of Hills ಎಂಬ ಶೀರ್ಷಿಕೆ ಕೊಟ್ಟು ಅನುವಾದಿಸಿರುವುದು. ಫ್ರೆಂಚ್ ಕವಿ ವಿಕ್ಟರ್ ಹೂಗೋನ, (A Hymn to the Great Dead) ಕವಿತೆಯನ್ನು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ. ಕವಿ ಇಕ್ಬಾಲ್ ಅವರ ‘ಹಿಂದೂಸ್ತಾನ್ ಹಮಾರ’ ಉರ್ದು ಕವಿತೆಯನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಅವರ ಇಂಗ್ಲೀಷ್ ಅನುವಾದ ಆ ಕವಿತೆಯ ಅತ್ಯುತ್ತಮ ಇಂಗ್ಲೀಷ್ ಅನುವಾದ ಎಂದು ಕವಿ ಇಕ್ಬಾಲ್ ಅವರೇ ಶ್ಲಾಘಿಸಿದ್ದರಂತೆ. ಇದೇ ಕವಿತೆಯನ್ನು ಪೈಗಳು ಕನ್ನಡಕ್ಕೆ ಯಥಾವತ್ ಅನುವಾದಿಸದೆ ಅವಲಂಬಿಸಿ ಬರೆದಿದ್ದಾರೆ. ಇಲ್ಲೆಲ್ಲ ಗೋವಿಂದ ಪೈ ಅವರ ಅನುವಾದ ಕಾರ್ಯದ ಅನನ್ಯತೆ ನಮ್ಮ ಗಮನಕ್ಕೆ ಬರುತ್ತದೆ.

    ಆಧುನಿಕ ಕನ್ನಡ ಕಥನಗಳೆಂದರೆ ಹತ್ತೊಂಬತ್ತನೆಯ ಶತಮಾನದಲ್ಲಿ ಕಾಣಿಸಿಕೊಂಡ ಕಾವ್ಯ ಪುರಾಣಗಳ ಗದ್ಯಾನುವಾದಗಳು, ಸಂಸ್ಕೃತ ಮತ್ತು ಇಂಗ್ಲೀಷ್ ನಾಟಕಗಳ (ಕಾದಂಬರಿ ಗಾತ್ರದ) ಕಥನರೂಪಗಳು, ಸಣ್ಣಕತೆ, ಕಾದಂಬರಿ, ರಮ್ಯಕಥಾನಕ ಮತ್ತು ಸಂವಾದಗಳಂತಹ ಗದ್ಯ ಕಥನಗಳನ್ನೆಲ್ಲ ಬಳಸಿಕೊಂಡು ಈ ಭಾಷಾಂತರ ಯುಗವನ್ನು ಕಟ್ಟಿಕೊಡಲಾಗಿದೆ. ಆಧುನಿಕ ಕನ್ನಡ ಸಾಹಿತ್ಯವು ಇಪ್ಪತ್ತನೆಯ ಶತಮಾನದಲ್ಲಿ ರಮ್ಯ ಕಥಾನಕ ಮತ್ತು ಸಂವಾದಗಳನ್ನು ಬಿಟ್ಟುಕೊಟ್ಟು ಸಣ್ಣಕತೆ ಮತ್ತು ಕಾದಂಬರಿಗಳೆಂಬ ಎರಡು ಸಾಹಿತ್ಯ ಪ್ರಕಾರಗಳಲ್ಲಿ ಬೆಳೆಯಿತು. ಕನ್ನಡದ ಆಧುನಿಕ ಕತೆ ಮತ್ತು ಕಾದಂಬರಿಗಳ ಮೇಲೆ ಪ್ರಭಾವ ಬೀರಿದ ಭಾಷಾಂತರಗಳನ್ನು ಇಲ್ಲಿ ಪ್ರಧಾನವಾಗಿ ವಿಶ್ಲೇಷಿಸಿರುವುದು ಅವಲೋಕನೀಯವಾಗಿದೆ.

    ಕನ್ನಡ ಭಾಷಾಂತರ ಯುಗದ ಆಯಾಮ ಹಾಗೂ ಆನನ್ನತೆಗಳನ್ನು ಡಾ. ಜನಾರ್ದನ ಭಟ್ ಅವರು ಇಲ್ಲಿ ಸೊಗಸಾಗಿ ಅನಾವರಣಗೊಳಿಸಿದ್ದಾರೆ. ಹೊಸಗನ್ನಡದ ಅರುಣೋದಯ ಕಾಲಘಟ್ಟದಲ್ಲಿ ನಡೆದ ಅನುವಾದ ಕಾರ್ಯಗಳನ್ನು ಉದಾಹರಣೆಯೊಂದಿಗೆ ವಿವರಿಸಿರುವುದು ಕನ್ನಡ ಅನುವಾದ ಕಾರ್ಯದಲ್ಲಿ ಭಟ್ ಅವರಿಗೆ ಇರುವ ಜ್ಞಾನ, ಅಪಾರವಾದ ಅನುಭವಗಳನ್ನು ನಮ್ಮ ಗಮನಕ್ಕೆ ತರುತ್ತದೆ. ಹೊಸಗನ್ನಡದಲ್ಲಿ ಅನುವಾದ ಲೋಕದ ಹೆಜ್ಜೆ ಹಾದಿಯನ್ನು ಚಿತ್ರಿಸುವ ಒಳ್ಳೆಯ ಕೃತಿಗಳು ಬಹಳ ಕಡಿಮೆ. ವ್ಯಾಪಕ, ಓದು, ಅಧ್ಯಯನ, ಅನುವಾದ ಕಾರ್ಯವನ್ನು ನಿರಂತರವಾಗಿ ಮಾಡಿದವರು ಮಾತ್ರ ಕನ್ನಡ ಭಾಷಾಂತರ ಕೈಂಕರ್ಯದ ಕುರಿತು ಅಧಿಕೃತವಾಗಿ ಮಾತಾಡಲು ಸಾಧ್ಯ. ಈ ಅರ್ಹತೆಯನ್ನು ಹೊಂದಿರುವ ಅಪರೂಪದ ಬಹುಶ್ರುತ ವಿದ್ವಾಂಸ, ಸಾಹಿತಿ, ಡಾ. ಜನಾರ್ದನ ಭಟ್. ಅವರ ಸೂಕ್ಷ್ಮ ಸಂವೇದನ ಸಾಮರ್ಥ್ಯ, ಗಾಢವಾದ ವಿದ್ವತ್ತು, ತೌಲನಿಕ ನೋಟ, ಬಹುಶಿಸ್ತೀಯ ವಿವೇಚನೆಗಳಿಂದ ಈ ಕೃತಿ ನಮ್ಮ ಗಮನ ಸೆಳೆಯುತ್ತದೆ. ಇದೊಂದು ವರ್ತಮಾನದ ಜರೂರಿನ ಉಪಕ್ರಮ. ಈ ಮಹತ್ವದ ಕೃತಿಗಾಗಿ ಡಾ. ಜನಾರ್ದನ ಭಟ್ ಅವರಿಗೆ ಹಾರ್ದಿಕ ಅಭಿನಂದನೆಗಳು.

    ಪ್ರೊ. ಜಿ.ಎನ್. ಉಪಾಧ್ಯ,
    ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ಮುಂಬೈ -400098
    9220212578, [email protected]

    ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.

    ಲೇಖಕ ಡಾ. ಬಿ. ಜನಾರ್ದನ ಭಟ್

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleತೆಕ್ಕಟ್ಟೆ ಯಶಸ್ವಿ ಯಕ್ಷಗಾನ ಕೇಂದ್ರದ ತರಗತಿ ಶುಭಾರಂಭ
    Next Article ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-15’ ಕೊಂಕಣಿ ಕವಿಗೋಷ್ಠಿ
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜೂನ್ 13ರಿಂದ

    June 11, 2026

    ವಿಪ್ರ ವೇದಿಕೆಯ ಸಭಾಂಗಣದಲ್ಲಿ ತಿಂಗಳ ಕಾರ್ಯಕ್ರಮ

    June 11, 2026

    ಮೇಘಮೈತ್ರಿ ಸಮ್ಮೇಳನ ಸವಿನೆನಪಿನ ದತ್ತಿ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ಜುಲೈ 07

    June 11, 2026

    ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಅರ್ಥಾಂಕುರ-20’ ಸರಣಿ ತಾಳಮದ್ದಳೆ

    June 11, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.