ಕಾಸರಗೋಡು : ವೈವಿಧ್ಯಮಯ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನ ಸೆಳೆದ ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಇದರ ವಿನೂತನ ಕಾರ್ಯಕ್ರಮ ‘ನವಪುರಂ ನವರಸಂ’ ಬಹುಭಾಷಾ ಕವಿ ಸಂಗಮ, ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಸಮರ್ಪಣೆ ಕಣ್ಣೂರು ಜಿಲ್ಲೆಯ ಚೆರುಪುಳ ಸಮೀಪದ ನವಪುರಂ ಮತಾತೀತ ಪುಸ್ತಕ ದೇವಾಲಯದಲ್ಲಿ ದಿನಾಂಕ 26 ಏಪ್ರಿಲ್ 2026ರಂದು ಜರಗಿತು.
ಪೆರ್ಲದಿಂದ ಹೊರಟು ಕಾಸರಗೋಡು ಜಿಲ್ಲೆಯಲ್ಲಿ ಮೂವತ್ತೈದು ಮಂದಿ ಸಾಹಿತಿ ಕಲಾವಿದರ ತಂಡ ಸಾಹಿತ್ಯಯಾತ್ರೆಯ ಮೂಲಕ ನವಪುರಕ್ಕೆ ತಲುಪಿ ಅಕ್ಷರೋತ್ಸವದಲ್ಲಿ ಭಾಗವಹಿಸಿತು. ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ಇವರ ಸಾರಥ್ಯದಲ್ಲಿ ಸಂಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರು ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನವಪುರಂ ಮತಾತೀತ ದೇವಾಲಯದ ಸ್ಥಾಪಕರು ಹಾಗೂ ವ್ಯವಸ್ಥಾಪಕರಾದ ಪ್ರಪೋಯಿಲ್ ನಾರಾಯಣನ್ ಮಾಸ್ಟರ್ ವಹಿಸಿದ್ದು, ಪ್ರಸಿದ್ಧ ಸಾಹಿತಿ ಪಿ.ಕೆ. ಗೋಪಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯಕವಿ ಸಾಹಿತಿ ಪತ್ರಕರ್ತರಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಅಶ್ವಿನಿ ಕೊಡಿಬೈಲು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಹಿತನುಡಿಗಳನ್ನಾಡಿದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತು ಅಧ್ಯಕ್ಷ, ಸಾಹಿತಿ, ಹರೀಶ್ ಸೂಲಾಯ ಒಡ್ಡಂಬೆಟ್ಟು ಮತ್ತು ಕವಯತ್ರಿ, ಪ್ರಾಧ್ಯಾಪಕಿ ಡಾ. ಆರ್ಯಗೋಪಿನಾಥ್ ಇವರಿಗೆ ನವಪುರಂ ದೇವಾಲಯದ ದ್ರಾವಿಡ ಭಾಷಾ ಸಾಹಿತ್ಯ ಪ್ರಶಸ್ತಿ ಪುರಸ್ಕಾರ ನೀಡಲಾಯಿತು. ಸಾಹಿತ್ಯ ಪಿ.ಕೆ. ಗೋಪಿ ಪುರಸ್ಕಾರ ಪ್ರದಾನ ಮಾಡಿದರು. ಸವಿ ಹೃದಯದ ಕವಿ ಮಿತ್ರರು ಬಳಗದ ವಿಶೇಷಹ್ವಾನಿತರಾದ ಜಯಾನಂದ ಪೆರಾಜೆ, ದಿನೇಶ್ ಕುಂದರ್ ಬಿಳಿನೆಲೆ, ಜೋಸ್ನಾ ಕಡಂದೇಲು, ಗಣೇಶ್ ಆಚಾರ್ಯ ಎಂ. ಅಡ್ಯನಡ್ಕ, ಅನುರಾಧ ರಾಜೀವ್ ಸುರತ್ಕಲ್ ಮೊದಲಾದವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಅನುರಾಧ ರಾಜೀವ್ ಸುರತ್ಕಲ್ ಪ್ರಾರ್ಥನೆ ಹಾಡಿದರು. ನವಪುರಂ ಕಾರ್ಯದರ್ಶಿ ಸಾಬು ಮೊಳಯೆಕಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ವಂದಿಸಿದರು. ಸುಶೀಲ ಪದ್ಯಾಣ ಮತ್ತು ಹರ್ಷಿತಾ ಪೆರ್ಲ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ, ಕೊಳಲುವಾದನ ಗಮನ ಸೆಳೆಯಿತು. ಸಾಹಿತಿ ಕಲಾವಿದ ವೆಂಕಟ್ ಭಟ್ ಎಡನೀರು ಇವರು ಭಾವಾಭಿನಯದ ಮೂಲಕ ರಂಜಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಅತಿಥಿ ಅಭ್ಯಾಗತರನ್ನು ಹಾಗೂ ಬಹುಭಾಷಾ ಸಾಹಿತಿಗಳನ್ನು ನವಪುರಂ ಪದಾಧಿಕಾರಿಗಳು ವರ್ಣರಂಜಿತ ಮೆರವಣಿಗೆಯೊಂದಿಗೆ ಸ್ವಾಗತಿಸಿದರು. ನವಪುರಂ ಮಾರ್ಗದರ್ಶಕ ಫಲಕವನ್ನು ಪಿ.ಕೆ. ಗೋಪಿ, ರಾಧಾಕೃಷ್ಣ ಉಳಿಯತ್ತಡ್ಕ, ಸುಭಾಷ್ ಪೆರ್ಲ, ಪ್ರಾಪೊಯಿಲ್ ನಾರಾಯಣನ್ ಮಾಸ್ಟರ್ ಅನಾವರಣಗೊಳಿಸಿದರು.

ಇದೇ ಸಂದರ್ಭದಲ್ಲಿ ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಇದರ ವತಿಯಿಂದ ಸಂಚಾಲಕ ಸುಭಾಷ್ ಪೆರ್ಲ ಇವರ ವಿನೂತನ ಪರಿಕಲ್ಪನೆಯಲ್ಲಿ ಬಹುಭಾಷಾ ಕವಿಗೋಷ್ಠಿ ಯಶಸ್ವಿಯಾಗಿ ಜರಗಿತು. ಪ್ರಕೃತಿಯ ರಮಣೀಯ ದೃಶ್ಯ ಸಾನ್ನಿಧ್ಯದಲ್ಲಿ ಜಿನುಗುವ ಹಸಿಮಳೆಯ ಮಧ್ಯೆ ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ದಿವ್ಯಾನುಭವವಾಯಿತು. ಗಡಿನಾಡ ಹನಿಗವನಗಳ ರಾಜ ಎಂದೇ ಗುರುತಿಸಿಕೊಂಡ ಕವಿ ಶಿಕ್ಷಕ ಹರೀಶ್ ನಾಯಕ್ ಮೀಯಪದವು ಅಧ್ಯಕ್ಷತೆ ವಹಿಸಿ ಇಂದಿನ ಕಾವ್ಯ ಸಂಧರ್ಭದ ಬಗ್ಗೆ ಮಾತನಾಡಿದರು. ಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲಾ ಕವಿಗಳು ವಾಚಿಸಿದ ಕವನಗಳನ್ನು ಸಂಕ್ಷಿಪ್ತವಾಗಿ ಪರಾಮರ್ಶಿಸಿ ಪ್ರೋತ್ಸಾಹಿಸಿದರು. ಕವಯತ್ರಿ ಪ್ರಮೀಳಾ ಚುಳ್ಳಿಕಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕವಿತೆಯನ್ನು ಪ್ರಸ್ತುತ ಪಡಿಸಿದರು. ಅನುರಾಧ ರಾಜೀವ್ ಸುರತ್ಕಲ್ ಹಿತ ನುಡಿಯಾಡಿದರು. ದಿನೇಶ್ ಕುಂದರ್ ಬಿಳಿನೆಲೆ, ಪ್ರೇಮ ಆರ್. ಶೆಟ್ಟಿ, ಜ್ಯೋತ್ಸ್ನಾ ಕಡಂದೇಲು. ಶಶಿಕಲಾ ಟೀಚರ್ ಕುಂಬಳೆ, ವಿಜಯ ಕಾನ, ರಿತೇಶ್ ಕಿರಣ್ ಕಾಟುಕುಕ್ಕೆ, ಸವಿತಾ ಕಾಟುಕುಕ್ಕೆ, ಕುಮಾರಿ ಹರ್ಷಿತಾ ಪೆರ್ಲ, ಸುಶೀಲಾ ಪದ್ಯಾಣ, ಜನಾರ್ದನ ನಾಯ್ಕ ಬೊಟ್ಟಾರಿ, ಸುಮನಾ ಕರಿಂಬಿಲ, ನರಸಿಂಹ ಭಟ್ ಏತಡ್ಕ, ಅವನಿ ಕರಿಂಬಿಲ, ಅಶ್ವಿನಿ ಕೊಡಿಬೈಲು, ಶ್ರೀದೇವಿ ಬಸ್ರೂರು, ಅನುರಾಧ ರಾಜೀವ್ ಸುರತ್ಕಲ್, ಕುಂಞಪ್ಪ ತ್ರಿಕರಿಪುರ, ಮಧುನಂಬಿಯಾರ್ ಮೂಕಮಂಗಳ ವಿವಿಧ ಭಾಷೆಗಳಲ್ಲಿ ಕವಿತೆ ವಾಚಿಸಿದರು. ಕವಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಸುಶೀಲ ಪದ್ಯಾಣ ಮತ್ತು ಹರ್ಷಿತಾ ಪೆರ್ಲ ಕಾರ್ಯಕ್ರಮವನ್ನು ನಿರೂಪಿಸಿದರು.
