ಬೆಂಗಳೂರು : ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ನೀಡುವ 2025ನೇ ಸಾಲಿನ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’ಗೆ ಲೇಖಕ ಶಶಿಧರ ಹಾಲಾಡಿ ಇವರ ‘ನದಿ ದಾಟಿ ಬಂದವರು’ ಕಾದಂಬರಿ ಆಯ್ಕೆಯಾಗಿದೆ. ಪ್ರಶಸ್ತಿಯು ರೂ.25,000/- ನಗದು ಒಳಗೊಂಡಿದ್ದು, ವಿಮರ್ಶಕಿ ಎಂ.ಎಸ್. ಆಶಾದೇವಿ ಮತ್ತು ಕಾದಂಬರಿಕಾರ್ತಿ ಎನ್. ಸಂಧ್ಯಾರಾಣಿಯವರು ಈ ಆಯ್ಕೆ ಮಾಡಿದ್ದಾರೆ. ಸ್ಪರ್ಧೆಗೆ 52 ಕಾದಂಬರಿಗಳು ಬಂದಿದ್ದವು.
ದ್ವಾರನಕುಂಟೆ ಪಾತಣ್ಣ ಅವರ 76ನೇ ಜನ್ಮದಿನವಾದ ದಿನಾಂಕ 14 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಇವರು ಸಮಾರಂಭ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಂ. ಹನೀಫ್ ತಿಳಿಸಿದ್ದಾರೆ.

ಶಶಿಧರ ಹಾಲಾಡಿಯವರು ಹೆಸರಾಂತ ಬರಹಗಾರರು ಮತ್ತು ವಿಶ್ವವಾಣಿ ಪತ್ರಿಕೆಯ ಪುರವಣಿ ವಿಭಾಗದ ಮುಖ್ಯ ಉಪಸಂಪಾದಕರು. ಮೂಲತಃ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರಾದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂ ಕ್ ಕನ್ನಡದಲ್ಲಿ ಎಂ.ಎ. ಪದವಿ ಗಳಿಸಿ, ಮೈಸೂರು ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಪೂರ್ಣ ಪ್ರಮಾಣದಲ್ಲಿ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಕಾದಂಬರಿ, ಸಣ್ಣಕಥೆ, ಪ್ರವಾಸ ಕಥನ, ನುಡಿಚಿತ್ರ, ಅಂಕಣ ಬರಹ, ವೈಚಾರಿಕ ಲೇಖನಗಳು ಹೀಗೆ ಬಹುಮುಖಿಯಾಗಿ ಬರೆದಿದ್ದು ಇವರ ಸಾವಿರಕ್ಕೂ ಹೆಚ್ಚು ಬರಹಗಳು ನಾಡಿನ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕಗಳನ್ನು ಅಲಂಕರಿಸಿವೆ. ಶಿವಮೊಗ್ಗದ ‘ನಾವಿಕ’ ದಿನಪತ್ರಿಕೆಯಲ್ಲಿ 12 ವರ್ಷ ಕಾಲ ಅಂಕಣಕಾರರಾಗಿದ್ದರು. ವಿಶ್ವವಾಣಿಯಲ್ಲಿ ಇವರ ‘ಶಶಾಂಕಣ’ ಮೂಡಿಬಂದಿದೆ. ವಿಶ್ವವಾಣಿ ಪತ್ರಿಕೆಯ ಪುರವಣಿ ವಿಭಾಗದ ಮುಖ್ಯ ಉಪಸಂಪಾದಕರಾಗಿಯೂ ಇವರ ಸೇವೆ ಸಂದಿದೆ.
ಸಾಹಿತ್ಯ ಮಾತ್ರವಲ್ಲದೆ ಛಾಯಾಗ್ರಹಣ, ಪರಿಸರ, ಪಕ್ಷಿವೀಕ್ಷಣೆ, ಚಾರಣ ಮುಂತಾದವು ಕೂಡಾ ಶಶಿಧರ ಹಾಲಾಡಿಯವರ ಹವ್ಯಾಸಗಳಲ್ಲಿ ಸೇರಿವೆ. ಹಿಮಾಲಯದಲ್ಲಿ ಚಾರಣ ನಡೆಸಿದ ಅನುಭವ ಇವರೊಂದಿಗಿದೆ. ಛಾಯಾಗ್ರಹಣದಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಇವರಿಗೆ ಬಹುಮಾನ ಸಂದಿದೆ. ಗ್ರಾಮೀಣ ಬದುಕು ಮತ್ತು ಪರಿಸರ ಚಿಂತನೆಗಳು ಇವರ ಅಂಕಣಗಳಲ್ಲಿ ವ್ಯಾಪಿಸಿವೆ. ಪರಿಸರಕ್ಕೆ ಸಂಬಂಧಿಸಿದ ವಿಷಯವನ್ನು ಒಳಗೊಂಡ ಇವರ ‘ಅಬ್ಬೆ’ ಕಾದಂಬರಿ ನಾಲ್ಕು ಪ್ರಶಸ್ತಿಗಳಿಗೆ ಭಾಜನವಾಗಿದೆ.
ಶಶಿಧರ ಹಾಲಾಡಿಯವರ ಪ್ರಕಟಿತ ಕೃತಿಗಳಲ್ಲಿ ‘ಕಾಲಕೋಶ’, ‘ಅಬ್ಬೆ’, ‘ನದಿ ದಾಟಿ ಬಂದವರು’ ಕಾದಂಬರಿಗಳು; ‘ಹಾಲಾಡಿಯಲ್ಲಿ ಹಾರುವ ಓತಿ’, ‘ನಾ ಸೆರೆ ಹಿಡಿದ ಕನ್ಯಾಸ್ತ್ರೀ’, ‘ಅಮ್ಮಮ್ಮನ ದೀಪಾವಳಿ’, ‘ಬೆಟ್ಟ ಗುಡ್ಡಗಳ ನಡುವೆ ಪುಟ್ಟ ಮನೆ’ ಪ್ರಬಂಧ ಸಂಕಲನಗಳು; ‘ಉರುಳಿದ ಕಟ್ಟಡ ಮರಳಿದ ನೆನಪು’, ‘ಪ್ರಕೃತಿ ಪ್ರಪಂಚ’, ‘ಓಲಿ ಕೊಡೆ’, ‘ಮನದ ಹಾಯಿದೋಣಿ’. ‘ಚಿತ್ತ ಹರಿದತ್ತ’ ಅಂಕಣ ಬರಹಗಳ ಸಂಕಲನಗಳು; ‘ಹಿತ್ತಲಿನಿಂದ ಹಿಮಾಲಯಕ್ಕೆ’ ಚಾರಣ ಕಥನ; ‘ದೇವರು ಎಚ್ಚರಗೊಂಡಾಗ’ ಪ್ರವಾಸ ಕಥನ; ‘ನ್ಯಾಯಾಶಾಸ್ತ್ರಜ್ಞ ಸರ್ ಬೆನಗಲ್ ನರಸಿಂಗ ರಾವ್’ ಜೀವನ ಚರಿತ್ರೆ; ‘ಟುವ್ವಿ ಹಕ್ಕಿಯ ಗೂಡು’ ಪರಿಸರ ಸಂಬಂಧಿ ಬರಹಗಳು ಸೇರಿದಂತೆ 18 ಕೃತಿಗಳಿವೆ.
ಶಶಿಧರ ಹಾಲಾಡಿ ಇವರಿಗೆ ‘ಚಡಗ ಕಾದ೦ಬರಿ ಪ್ರಶಸ್ತಿ’, ‘ಸ್ವಾಭಿಮಾನಿ ಕರ್ನಾಟಕ ಪುಸ್ತಕ ಪ್ರಶಸ್ತಿ’, ‘ಬೆರಗು ಪುಸ್ತಕ ಪ್ರಶಸ್ತಿ’, ‘ಸೋಲೂರು ಮುರುಗಾರಾಧ್ಯ ಪ್ರಶಸ್ತಿ’, ‘ಹಾಮಾನ ಪ್ರಶಸ್ತಿ’, ‘ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ’, ‘ಹಾಮಾನಾ ಅಂಕಣ ಬರಹ ಪ್ರಶಸ್ತಿ’, ‘ಕನ್ನಡ ಸೇವಾ ರತ್ನ ಪ್ರಶಸ್ತಿ’, ‘ಕರುನಾಡು ಸೇವಾ ರತ್ನ’ ಪ್ರಶಸ್ತಿ ಮು೦ತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
