ತೆಕ್ಕಟ್ಟೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಉಡುಪಿ ಜಿಲ್ಲೆ ಸಹಕಾರದೊಂದಿಗೆ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಆಶ್ರಯದಲ್ಲಿ ‘ಶ್ರೀ ರಾಮಚರಿತಾಮೃತಂ’ ಸರಣಿ ಕಾರ್ಯಕ್ರಮವನ್ನು ದಿನಾಂಕ 05 ಜುಲೈ 2026ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಸಿದ್ಧ ಸಂಘಟಕ ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ ಇವರು ಮಾತನಾಡಿ “ತಾಳಮದ್ದಳೆ ಪ್ರಕಾರಗಳಿಗೆ ಕಲಾವಿದರು ಬೆಳೆಯಬೇಕಾದರೆ ವಾರದ ಕೂಟ ಹೆಚ್ಚು ಹೆಚ್ಚು ಅಗತ್ಯ. ಮಾತಿನ ಪ್ರಬುದ್ಧತೆಗೆ ನಿರಂತರ ಕೂಟಗಳು ಅಗತ್ಯ. ಜ್ಞಾನವನ್ನು ವೃದ್ಧಿಸುವ, ಅಪಾರ ಅನುಭವವನ್ನು ನೀಡುವ, ಚಿಂತನ ಮಂಥನ ಮಾಡುವ ಈ ಕಾರ್ಯಕ್ರಮ ನಿರಂತರ ನಡೆಯುವಂತಾದರೆ ಕಲಾವಿದರಿಗೆ ಅವಕಾಶ ದೊರೆಯುವದರ ಜೊತೆಗೆ ರಂಗಕ್ಕೆ ಬಹಳ ದೊಡ್ಡ ಕೊಡುಗೆಯಾಗಿ ಸಂಸ್ಥೆ ಶ್ರಮಿಸಿದಂತಾಗುತ್ತದೆ” ಎಂದು ಹೇಳಿದರು.
ಗುರು ಲಂಬೋದರ ಹೆಗಡೆ ನಿಟ್ಟೂರು, ರಂಗ ನಿರ್ದೇಶಕಿ ಸುಧಾ ಮಣೂರು, ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಕೀರ್ತನ್ ಮಿತ್ಯಂತ ಹಾಲಾಡಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ತಾಳಮದ್ದಳೆ ‘ಶ್ರೀ ರಾಮ ಪಟ್ಟಾಭಿಷೇಕ’ ರಂಗ ಪ್ರಸ್ತುತಿಗೊಂಡಿತು.
