ಉಡುಪಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಉಡುಪಿ ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಇಲ್ಲಿನ ಶ್ರೀ ಮುಖ್ಯಪ್ರಾಣ ದೇವರು ಮತ್ತು ಶ್ರೀ ನಾಗದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ದೇವಳದಲ್ಲಿ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಇವರ ನಿರ್ದೇಶನದಲ್ಲಿ ತಾಳಮದ್ದಳೆ ಕೂಟ ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸಮರ ಸೌಗಂಧಿಕಾ’ ಎಂಬ ಆಖ್ಯಾನದೊಂದಿಗೆ ದಿನಾಂಕ 05 ಏಪ್ರಿಲ್ 2026ರಂದು ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ, ಚೆಂಡೆ ಮದ್ದಳೆಗಳಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಬಸವ ಮುಂಡಾಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಭೀಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ), ಹರಿಣಾಕ್ಷಿ ಜೆ. ಶೆಟ್ಟಿ (ಹನುಮಂತ), ರಾಜಶ್ರೀ ಶಬರಾಯ (ಕುಬೇರ), ವಿದ್ಯಾಲಕ್ಷ್ಮಿ ಆರ್. ಭಟ್ (ಚರ) ಸಹಕರಿಸಿದರು. ಭಾಗವತ ನಾರಾಯಣ ಶಬರಾಯ ಸ್ವಾಗತಿಸಿ, ವಂದಿಸಿದರು. ಶಬರಾಯ ದಂಪತಿಗಳು ಕಾರ್ಯಕ್ರಮ ಪ್ರಾಯೋಜಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಲಾಯಿತು.
