ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ವೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ದಿನಾಂಕ 31 ಮಾರ್ಚ್ 2026ರ ಮಂಗಳವಾರ ಕಲಾವಿದರ ಯಕ್ಷ ಪಯಣದ ಸ್ವಗತ ‘ಯಕ್ಷಾಯಣ’ ದಾಖಲೀಕರಣ ಸರಣಿ-10ರ ಕಾರ್ಯಕ್ರಮವು ಮಂಗಳಗಂಗೋತ್ರಿ ಯಕ್ಷಗಾನ ಕಲಾ ಕೇಂದ್ರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಯಕ್ಷಗಾನ ವಿದ್ವಾಂಸ, ಕಲಾವಿದ ಪ್ರೊ. ಎಂ.ಎಲ್. ಸಾಮಗ “ಯಕ್ಷಗಾನ ಜನರ ನಡುವೆ ಸಂಭವಿಸುವ ಪುರಾಣಲೋಕ, ಗಾನ, ಕುಣಿತ, ಅಭಿನಯ, ವೇಷವೈಭವದೊಂದಿಗೆ ಬೌದ್ಧಿಕ ಜಿಜ್ಞಾಸೆಗೂ ಮಹತ್ವವಿದೆ. ಯಕ್ಷಗಾನದಲ್ಲಿ ಆಖ್ಯಾನಕ್ಕಿಂತ ವ್ಯಾಖ್ಯಾನ ಮುಖ್ಯ. ಜಾಗತಿಕ ರಂಗಭೂಮಿಯಲ್ಲಿ ಯಕ್ಷಗಾನ ಗಟ್ಟಿಯಾಗಿ ನಿಲ್ಲಬೇಕಾದರೆ ಯಕ್ಷಗಾನಕ್ಕೆ ಶೈಕ್ಷಣಿಕ ನೆಲೆಗಟ್ಟು ಕೂಡ ಅಗತ್ಯವಾಗಿ ದೊರಕಬೇಕಿದೆ. ಯಕ್ಷಗಾನವನ್ನು ಮುಕ್ತ ಮನಸ್ಸಿನಿಂದ ನೋಡುವ ಮನೋಭಾವ ನಮ್ಮದಾಗಬೇಕು. ತನ್ನ ನೈಪುಣ್ಯತೆಯಿಂದ ಪ್ರೇಕ್ಷಕನ್ನು ಸೆಳೆಯುವುದೇ ಕಲಾವಿದನ ಮೊದಲ ಆದ್ಯತೆಯಾಗಬೇಕು” ಎಂದು ಹೇಳಿದರು.
ಮಂಗಳೂರು ವಿ.ವಿ.ಯ ವಿಶ್ರಾಂತ ಕುಲಸಚಿವ ಕೆ. ರಾಜು ಮೊಗವೀರ ಮಾತನಾಡಿ, “ಯಕ್ಷಗಾನ ಸರ್ವಾಂಗೀಣ ಕಲೆಯನ್ನು ಮುಂದಿನ ಪೀಳಿಗೆಗೂ ಸಂಪ್ರದಾಯಬದ್ದವಾಗಿ ದಾಟಿಸುವ ನಿಟ್ಟಿನಲ್ಲಿ ಯಕ್ಷಗಾನ ಕಲಾವಿದರ ದಾಖಲೀಕರಣ ಕಾರ್ಯಕ್ರಮ ಅತ್ಯಂತ ಮಹತ್ವವಾದುದು” ಎಂದು ಹೇಳಿದರು.
ಯಕ್ಷಗಾನ ಅಧ್ಯಯನ ಕೇಂದ್ರ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಮಾತನಾಡಿ, “ಯಕ್ಷಗಾನದ ಅಧ್ಯಯನ ಕೇಂದ್ರದ ಸರಣಿ ಕಾರ್ಯಕ್ರಮದ ರೂಪದಲ್ಲಿ ಹತ್ತು ಜನ ಕಲಾವಿದರ ದಾಖಲೀಕರಣವನ್ನು ಒಂದು ಹಂತದಲ್ಲಿ ಮಾಡಲಾಗಿದ್ದು, ಮಾತುಗಳನ್ನು ಬರಹ ರೂಪಕ್ಕಿಳಿಸಿ ಕೃತಿಯ ರಚನೆ ಕಾರ್ಯ ಪ್ರಗತಿಯಲ್ಲಿದೆ” ಎಂದರು.

ಹಿರಿಯ ಯಕ್ಷಗಾನ ಅರ್ಥಧಾರಿ ಸುಣ್ಣಂಬಳ ಈಶ್ವರ ಭಟ್, ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ. ಸತೀಶ್ ಕೋಣಾಜೆ, ಸ್ವಾತಿ ರಾವ್ ಉಪಸ್ಥಿತರಿದ್ದರು. ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು.
