ತೆಕ್ಕಟ್ಟೆ : ಶ್ರೀ ಮಾರಿಕಾಂಬಾ ದೇವಸ್ಥಾನ ಆರಗ, ತೀರ್ಥಹಳ್ಳಿ ಇದರ ಜಾತ್ರಾ ಮಹೋತ್ಸವದಲ್ಲಿ ದಿನಾಂಕ 12 ಏಪ್ರಿಲ್ 2026ರಂದು ಯಶಸ್ವೀ ಕಲಾ ವೃಂದ ಕೊಮೆ ತೆಕ್ಕಟ್ಟೆ ಇದರ ಸಂಘಟಕ ವೆಂಕಟೇಶ ವೈದ್ಯ ಇವರನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಮತಿ ನೈಜಲಾ ಪಟಮಿಕ್ಕಿ ರತ್ನಾಕರ್ “ಯಕ್ಷಗಾನದಲ್ಲಿ ಅತ್ಯುತ್ತಮ ಕೃಷಿ ಮಾಡಿದ ಸಂಸ್ಥೆ ಯಶಸ್ವಿ ಕಲಾವೃಂದ. ಇಂತಹ ಸಂಸ್ಥೆಯ ಯಕ್ಷಗಾನದ ರಂಗ ಪ್ರಸ್ತುತಿ ಮನೋಜ್ಞವಾದದ್ದು. ಮಕ್ಕಳ ಯಕ್ಷಗಾನದಲ್ಲಿ ಪ್ರಬುದ್ಧತೆ ಇದೆ. ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಗಮನಿಸಿದರೆ ನಿಜಕ್ಕೂ ಸಂತೋಷವಾಗುತ್ತದೆ” ಎಂದು ಕಲಾತಂಡವನ್ನು ಗೌರವಿಸಿ ಮಾತನಾಡಿದರು.
ಭೋಜರಾಜ ಬಿ.ಟಿ., ಕೃಷ್ಣಮೂರ್ತಿ, ಸಂದೀಪ್, ವಿಷ್ಣುಮೂರ್ತಿ ದಾವಣೆ ಬೈ, ಚಂದವಳ್ಳಿ ಸೋಮಶೇಖರ್, ಮಂಜುನಾಥ್ ಎಸ್.ಎನ್., ಗುರು ಲಂಬೋದರ ಹೆಗಡೆ, ಕಲಾವಿದೆ ಪೂಜಾ ಆಚಾರ್ಯ, ಅನುಷಾ ಉರಾಳ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಪ್ರಸಂಗ ‘ಕೃಷ್ಣಲೀಲೆ ಕಂಸವಧೆ’ ರಂಗ ಪ್ರಸ್ತುತಿಗೊಂಡಿತು.
