ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರು ಬರೆದ 483 ಪುಟಗಳ ‘ಕೃತಿ ಸಂಕೀರ್ಣ’ವು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಮರ್ಥವಾಗಿ ಬರೆಯಬಲ್ಲ ಅವರ ಸೃಜನ ಶಕ್ತಿಗೆ ಹಿಡಿದ ಕೈಗನ್ನಡಿ. ಇಲ್ಲಿ ಪೂರ್ಣಾವಧಿಯ ನಾಟಕಗಳಿವೆ, ಪ್ರವಾಸ ಕಥನವಿದೆ, ಆತ್ಮಕಥೆಯಿದೆ, ವ್ಯಕ್ತಿ ಚಿತ್ರಣಗಳಿವೆ, ಮುನ್ನುಡಿ ಮತ್ತು ಪುಸ್ತಕ ಸಮೀಕ್ಷೆಗಳಿವೆ ಮತ್ತು ಮಕ್ಕಳಿಗಾಗಿ ಬರೆದ 38 ಕವಿತೆಗಳಿವೆ. ಎಲ್ಲವೂ ಓದುಗರಿಗೆ ಖುಷಿ ನೀಡುವ ಗುಣ ಹೊಂದಿವೆ.
ಮೊದಲನೆಯದು ನಾಟಕ ‘ಮಹಾತಪಸ್ವಿ’. ವಿಶ್ವಾಮಿತ್ರರು ಛಲದಿಂದ ಸಾಧನೆ ಮಾಡಿ ಬ್ರಹ್ಮರ್ಷಿಯಾದ ಕಥೆ. ಪೌರಾಣಿಕ ಕಥಾವಸ್ತು. ಈ ವಸ್ತುವನ್ನು ಸೋಮಯಾಜಿಯವರು ಅದೆಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆಂದರೆ ಸಂಭಾಷಣೆಗಳನ್ನು ಮತ್ತೆ ಮತ್ತೆ ಓದೋಣವೆಂದು ಅನ್ನಿಸುತ್ತದೆ. ಚಿಕ್ಕ ಚಿಕ್ಕ ಸಂಭಾಷಣೆಗಳು. ಆದರೆ ಅವುಗಳ ಧ್ವನಿಶಕ್ತಿ ಬಹಳ ದೊಡ್ಡದು. ನಾಟಕದ ಸತ್ವವಿರುವುದೇ ಅವುಗಳ ಸಂಭಾಷಣೆಗಳ ಧ್ವನಿಯಲ್ಲಿ. ಪೌರಾಣಿಕ ನಾಟಕದಲ್ಲಂತೂ ಅದರ ನಿರ್ವಹಣೆ ಒಂದು ಸವಾಲೇ ಸರಿ. ಮಾತಿನ ಶೈಲಿಯಲ್ಲಿ ನಾಟಕಕಾರ ಪ್ರಾಚೀನ ಕಾಲಕ್ಕೆ ಹೋಗಬೇಕು. ಮಾತ್ರವಲ್ಲದೆ ಇಲ್ಲಿ ಸೋಮಯಾಜಿಯವರು ಸೂತ್ರಧಾರ-ಭಾಗವತರ ಮೂಲಕ ಆಧುನಿಕ ಕಾಲದ ಪ್ರೇಕ್ಷಕರನ್ನು ಪ್ರಾಚೀನ ಕಾಲಕ್ಕೆ ಕರೆದೊಯ್ಯುತ್ತಾರೆ. ಆ ಸೂತ್ರಧಾರ ಮತ್ತು ಭಾಗವತರು ನಾಟಕ ಮತ್ತು ಪ್ರೇಕ್ಷಕರ ನಡುವೆ ಸೇತುವೆ ಕಟ್ಟ ಬೇಕು. ಅವರ ಸಂಭಾಷಣೆಗಳು ಆಧುನಿಕವೂ ಆಗಿರಬೇಕು. ಪ್ರಾಚೀನ ಕಥೆಗೆ ಹೊಂದುವಂಥದ್ದೂ ಅಗಿರಬೇಕು. ಪ್ರೇಕ್ಷಕರಲ್ಲಿ ಆಸಕ್ತಿ ಹುಟ್ಟಿಸಲು ತಿಳಿ ಹಾಸ್ಯ-ವಿಡಂಬನೆಗಳೂ ಇರಬೇಕು. ಇದು ತಂತಿಯ ಮೇಲೆ ನಡೆದಂತೆ ಕಷ್ಟಕರವೂ ಹೌದು. ಆದರೆ ಈ ಎಲ್ಲ ಸವಾಲುಗಳನ್ನು ಗೆಲ್ಲುವುದಲ್ಲದೆ ನಡುನಡುವೆ ಸಂದರ್ಭಗಳಿಗೆ ಚೆನ್ನಾಗಿ ಹೊಂದುವ ಔಚಿತ್ಯಪೂರ್ಣವೂ ಪ್ರಾಸಬದ್ಧವೂ ಆದ ಹಾಡುಗಳನ್ನೂ ಸೇರಿಸಿಕೊಂಡು ಸೋಮಯಾಜಿಯವರು ಒಂದು ಬಹಳ ಒಳ್ಳೆಯ ನಾಟಕವನ್ನು ನೀಡಿದ್ದಾರೆ. ‘ಚಾಣಕ್ಯ’ ಎಂಬ ಐತಿಹಾಸಿಕ ನಾಟಕದಲ್ಲೂ ಇವೇ ಗುಣಗಳು ಕಾಣುತ್ತವೆ. ಐತಿಹಾಸಿಕ ನಾಟಕವೆಂದ ಮೇಲೆ ಇತಿಹಾಸದ ಆಳವಾದ ಜ್ಞಾನವನ್ನು ಹೊಂದಿರಬೇಕು. ಅಪ್ರಸ್ತುತ ವಿಷಯಗಳನ್ನು ಪ್ರೇಕ್ಷಕರು ಆಕ್ಷೇಪಿಸುತ್ತಾರೆ. ಈ ಎಲ್ಲ ಪ್ರಶ್ನೆಗಳನ್ನೂ ನೀಗಿಸಿಕೊಂಡು ಸೋಮಯಾಜಿಯವರು ಒಂದು ಒಳ್ಳೆಯ ಐತಿಹಾಸಿಕ ನಾಟಕವನ್ನೂ ಕೊಟ್ಟಿದ್ದಾರೆ.
‘ಗಾಂಧಿ ನಾಡಲ್ಲೆಂಟು ದಿನ’ ಕುತೂಹಲ ಅರಳಿಸುತ್ತ ಓದಿಸಿಕೊಂಡು ಹೋಗುವ ಒಂದು ಮಾದರಿ ಪ್ರವಾಸ ಕಥನ. ಇಲ್ಲಿ ಸೋಮಯಾಜಿಯವರು ನೀಡಿರುವುದು ಬರೇ ಒಣ ವಿವರಣೆಗಳಲ್ಲ. ಮಾನವೀಯ ಸ್ಪರ್ಶವುಳ್ಳ ಪ್ರವಾಸದ ಆಹ್ಲಾದಕರ ಚಿತ್ರಣ. ಗಾಂಧಿ ನಾಡಿನ ಗೊಂಡ್ಲಾ ಪ್ಯಾಲೇಸ್, ಜುನಾಗಢದ ಕೋಟೆ, ಸಾಸನ್ ಗೀರ್ ಎಂಬ ಸಿಂಹಗಳ ರಕ್ಷಿತಾರಣ್ಯ, ಪರ್ಯಾಯದ್ವೀಪದಂತೆ ಕಾಣುವ ಪೋರ್ಚುಗೀಸ್ ವಸಾಹತಾಗಿದ್ದ ದಿಯು ಎಂಬ ಕೇಂದ್ರಾಡಳಿತ ಪ್ರದೇಶ, ಸಂತ ಪಾಲ್ ಚರ್ಚ್, ಗಂಗೇಶ್ವರ, ಪ್ರಸಿದ್ದ ಜ್ಯೋತಿರ್ಲಿಂಗಗಳಾದ ಸೋಮನಾಥ ಮತ್ತು ನಾಗೇಶ್ವರ, ಗಾಂಧೀಜಿಯವರ ಮನೆ ಕೀರ್ತಿಸೌಧ, ಬೇಟ್ ದ್ವಾರಕ (ಶಂಖೋದರ), ಕೃಷ್ಣನ ದ್ವಾರಕಾ, ಆಲ್ ಫ್ರೆಡ್ ಹೈಸ್ಕೂಲ್, ಕಬ್ಜಾ ಗಾಂದಿ ಕಾ ಡೇಲಾ, ಸಾಬರಮತಿ, ಅಕ್ಷರಧಾಮ, ಅದಾಲೆಜ್ ನ ಇಳಿಬಾವಿ, ರಾಜಸ್ಥಾನದ ಅಬೂ, ದಿಲ್ ವಾರಾ ಜಿನಮಂದಿರಗಳು, ನೆಕ್ಕಿ ಸರೋವರ,ಕೇಸರ್ ಭವನ ಮೊದಲಾದ ಸ್ಥಳಗಳಿಗೆ ಅವರು ತಮ್ಮ ಬಂಧುಗಳ ಜತೆಗೆ ಹೋದ ಅವರು ತಮಾಷೆ ಮಾತನಾಡುತ್ತ, ಸಂತಸವನ್ನು ಹಂಚಿಕೊಳ್ಳುತ್ತ, ನಡುನಡುವೆ ಅಡೆತಡೆಗಳನ್ನು ಜತೆಯಾಗಿ ಎದುರಿಸುತ್ತ, ಉಂಟಾದ ಸಮಸ್ಯೆಗಳನ್ನು ಸಹನೆ-ಧೈರ್ಯಗಳಿಂದ ಎದುರಿಸುತ್ತ ಹೋಗುವುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ. ಎಲ್ಲರೂ ಜತೆ ಸೇರಿ ಹೋಗುವಾಗ ಆಡುವ ತುಂಟ ತಮಾಷೆ ಮಾತುಗಳು, ಅನಾನುಕೂಲಗಳಾದಾಗ ಮಾಡುವ ಗೊಣಗಾಟಗಳು, ಸಂತೋಷವಾದಾಗ ಮಾಡುವ ಉದ್ಗಾರಗಳು ಇಲ್ಲಿ ಯಥಾವತ್ತಾಗಿ ಚಿತ್ರಣಗೊಂಡಿವೆ. ನೋಡಿದ ಜಾಗಗಳಿಗೆ ಸಂಬಂಧ ಪಟ್ಟ ಕಥೆಗಳು, ಐತಿಹಾಸಿಕ ಹಿನ್ನೆಲೆ-ವರ್ಣನೆಗಳು ಹೃದ್ಯವಾಗಿವೆ. ಓದುಗರಿಗೆ ಸ್ವತಃ ತಾವೇ ಹೋದ ಅನುಭವವನ್ನು ಕೊಡುತ್ತವೆ.
‘ಬದುಕು ಕಲಿಸಿದ ಪಾಠ’ ಆತ್ಮಕಥೆಯ ಶೈಲಿಯಲ್ಲಿದೆಯಾದರೂ ಒಳಗಿನ ವಿವರಗಳು ಒಂದು ಇಡೀ ಸಮುದಾಯದ ಕಥೆ ಹೇಳುತ್ತದೆ. ಲೇಖಕರ ಹಿರಿಯ ತಲೆಮಾರಿನವರು ಹೇಗೆ ಜೀವನ ಸಾಗಿಸುತ್ತಿದ್ದರು ಎಂಬಲ್ಲಿಂದ ಹಿಡಿದು ಜೀವನದ ಹಾದಿಯಲ್ಲಿ ಲೇಖಕರು ಈ ಮಟ್ಟಕ್ಕೆ ಬೆಳೆಯುವಲ್ಲಿ ಸಹಕಾರ ನೀಡಿದ ಇಂದಿನ ತಲೆಮಾರಿನ ಹಲವರ ಕುರಿತು ಇಲ್ಲಿ ವಿವರಗಳಿವೆ. ಲೇಖಕರು ಚಿಕ್ಕವರಿದ್ದಾಗ ತಂದೆಯವರು ಮಾಡುತ್ತಿದ್ದ ಕಟ್ಟುನಿಟ್ಟು, ಹಣಕ್ಕಾಗಿ ಪರದಾಟ, ಸ್ವಾಭಿಮಾನದ ಕಾರಣದಿಂದ ಮನೆಯ ಸಮೀಪದ ಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಆದ ಕೂಡಲೇ ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಮಠದಲ್ಲಿ ಆಶ್ರಯ ಪಡೆದು ಕನ್ನಡ ವಿದ್ವಾನ್ ತರಗತಿ ಸೇರಿದ್ದು, ಹೈಸ್ಕೂಲ್ ಅಧ್ಯಾಪಕನಾದದ್ದು, ಕನ್ನಡ ಎಂ.ಎ. ಮಾಡಿ ಕಾಲೇಜು ಪ್ರಾಧ್ಯಾಪಕ ಹುದ್ದೆ ಗಳಿಸಿದ್ದು, ಕಾಲೇಜಿನಲ್ಲಿ ನಿರಂತರವಾಗಿ ನಡೆಸಿದ ಸಾಹಿತ್ಯ ಮತ್ತು ನಾಟಕ ಚಟುವಟಿಕೆಗಳು, ವಿದ್ಯಾರ್ಥಿಗಳ ಮೆಚ್ಚುಗೆ, ನಿವೃತ್ತಿ ಹೊಂದಿದ ನಂತರ ಎಡೆಬಿಡದೆ ನಡೆಸಿದ ಬರವಣಿಗೆ ಮತ್ತು ಸಂಘಟನೆಯ ಕೆಲಸಗಳು, ಆಕಸ್ಮಿಕವಾಗಿ ಪಡೆದ ಪ್ರಶಸ್ತಿ ಪುರಸ್ಕಾರಗಳು- ಹೀಗೆ ಅವರ ಕಥನ ಸಾಗುತ್ತದೆ. ಎಲ್ಲೂ ಆತ್ಮಸ್ತುತಿ ಮಾಡಿಕೊಳ್ಳದೆ ದಾರಿಯಲ್ಲಿ ಸಹಕಾರ ನೀಡಿದ ಎಲ್ಲರನ್ನೂ ವಿನಯಪೂರ್ವಕವಾಗಿ ನೆನಪಿಸಿಕೊಳ್ಳುವ ಅವರ ಸುಂದರ ನಿರೂಪಣಾ ಶೈಲಿ ಮನಸ್ಸಿಗೆ ಮುದ ನೀಡುತ್ತದೆ.
ಕೃತಿಯಲ್ಲಿ ನಾಲ್ಕು ವ್ಯಕ್ತಿ ಚಿತ್ರಣಗಳಿವೆ. ಸುಶೀಲಾ ಉಪಾಧ್ಯಾಯ, ಪಿ. ಕಾಳಿಂಗರಾವ್, ಡಾ. ಶಿವರಾಮ ಕಾರಂತ ಮತ್ತು ನಂದಳಿಕೆ ಲಕ್ಷ್ಮಿನಾರಣಪ್ಪರ ಬದುಕು- ಸಾಧನೆಗಳ ವಿವರಗಳು ಇಲ್ಲಿವೆ. ಇಲ್ಲಿಯೂ ಸೋಮಯಾಜಿಯವರು ಆ ವ್ಯಕ್ತಿಗಳು ಬಾಲ್ಯದಲ್ಲಿ ಎದುರಿಸಿದ ಕಷ್ಟ, ಬಡತನ, ತೀರಾ ಪ್ರತಿಕೂಲ ಪರಿಸ್ಥಿತಿಗಳು ಮತ್ತು ಕ್ರಮೇಣ ಸ್ವಪ್ರಯತ್ನದಿಂದ ಮೇಲೆ ಬಂದು ಯಶಸ್ಸು ಪಡೆದ ಕಥೆಗಳನ್ನು ಮೆಚ್ಚುಗೆ ಮತ್ತು ಅಭಿಮಾನಗಳಿಂದ ದಾಖಲಿಸಿದ್ದಾರೆ.
‘ಮೊದಲ ಓದಿನ ಪುಳಕ’ ವಿಭಾಗದಲ್ಲಿ ಕೆಲವು ಆಯ್ದ ಪುಸ್ತಕಗಳಿಗೆ ಸೋಮಯಾಜಿಯವರು ಬರೆದ ಮುನ್ನುಡಿಗಳು ತುಂಬಾ ಚೆನ್ನಾಗಿವೆ. ಪುಸ್ತಕವನ್ನು ಸಮಗ್ರವಾಗಿ ಗಮನವಿಟ್ಟು ಓದಿ ಒಳಗಿನ ತಿರುಳನ್ನು ವಿಮರ್ಶಿಸಿ ಪ್ರೋತ್ಸಾಹಿಸುವಲ್ಲಿ ಅವರು ಕೃತಿಗೆ ನ್ಯಾಯ ಸಲ್ಲಿಸಿದ್ದಾರೆ. ಈಗ ಪ್ರಸಿದ್ಧ ಕಥೆಗಾರರಾಗಿರುವ ಇಂದ್ರಕುಮಾರ್ ಹೆಚ್.ಅವರ ಕಥಾಸಂಕಲನಕ್ಕೆ ಬರೆದ ಮುನ್ನುಡಿ ವಿಸ್ತಾರವಾಗಿದ್ದು ಕೃತಿಯ ಬಗ್ಗೆ ಬಹಳ ಕುತೂಹಲ ಹುಟ್ಟಿಸುವಂತೆ ಬರೆಯಲ್ಪಟ್ಟಿದೆ. ‘ಲೇಖನಗಳು’ ವಿಭಾಗದಲ್ಲಿ ಮೂರು ಮಂದಿ ಹಿರಿಯ ಲೇಖಕರ ಕೃತಿಗಳ ವಿಮರ್ಶೆ ಮತ್ತು ‘ಕ್ವಾಟ ಕನ್ನಡ-ಸಂಸ್ಕೃತಿ’ ಎಂಬ ವಿಷಯದ ಕುರಿತು ಚಿಂತನೆಯಿದೆ.
ಕೊನೆಯ ವಿಭಾಗ ‘ಹಾಡು ಮಗೂ ಹಾಡು’ ಎಳೆಯ ಮಕ್ಕಳಿಗಾಗಿ ಬರೆದ 35 ಕವಿತೆಗಳ ಗುಚ್ಛ. ಸುಂದರವಾದ ಈ ಕವಿತೆಗಳ ಮೊದಲ ಭಾಗವು ಸರಳವಾದ ಮತ್ತು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲ ಚಿಟ್ಟೆ, ಇರುವೆ, ಚಂದಿರ, ಅಪ್ಪ, ಅಮ್ಮ, ತೋಟ, ಶಾಲೆ, ಟೀಚರ್ ಮೊದಲಾದ ವಸ್ತುಗಳಿಂದ ಕೂಡಿದ್ದು ಮಾತ್ರವಲ್ಲದೆ ಛಂದೋಬದ್ಧವಾಗಿದ್ದು ಮಕ್ಕಳು ಸಂತಸದಿಂದ ಹಾಡಲು ಮತ್ತು ಕುಣಿಯಲು ಯೋಗ್ಯವಾಗಿವೆ. ಎರಡನೆಯ ಹಂತವು ಮಕ್ಕಳ ಅರಿವಿನ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಬರೆದ ರೈತಮಿತ್ರ, ಹಣ, ಕಲಿಕೆ, ವ್ಯಾಮೋಹ, ಕನ್ನಡ, ಶ್ರಮಜೀವಿ, ತಾಯ್ನುಡಿ ಹೀಗೆ ಸಾಗುತ್ತ ಜೀವನ ಮೌಲ್ಯಗಳ ಸಂದೇಶವನ್ನು ಸಾರುತ್ತವೆ. ಈ ಕೃತಿಗೆ ಖ್ಯಾತ ವಿಮರ್ಶಕ ಬೆಳಗೋಡು ರಮೇಶ ಭಟ್ಟರ ಒಂದು ವಿದ್ವತ್ಪೂರ್ಣ ಮುನ್ನುಡಿಯಿದೆ.
ಸೋಮಯಾಜಿಯವರ ಈ ಎಲ್ಲ ಬರೆಹಗಳೂ ಇಷ್ಟವಾಗುವುದು ಅವರ ಬರವಣಿಗೆಯ ಆಪ್ತವಾಗುವ ಶೈಲಿಯಿಂದ. ಪದ ವಿನ್ಯಾಸದ ಆಕರ್ಷಣೆಯಿಂದ. ಒಳಗಿನ ಸತ್ವದಲ್ಲಡಗಿದ ಮೌಲ್ಯಪಾಠದಿಂದ. ಅವರ ಮಾಗಿದ ಲೇಖನಿ ಸದಾ ಸಕ್ರಿಯವಾಗಿರಲಿ.

ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
